ಬೆಂಗಳೂರು ಟೆಕ್ಕಿಯೊಬ್ಬರನ್ನು ಲೈಂಗಿಕ ಸಮಸ್ಯೆ ಪರಿಹಾರದ ನೆಪದಲ್ಲಿ ನಕಲಿ ಗುರೂಜಿ ವಿಜಯ್ ಮತ್ತು ಆತನ ಸಹಚರ 48 ಲಕ್ಷ ರೂ. ವಂಚಿಸಿದ್ದರು.ವಿಜಯ್ ಗುರೂಜಿಯನ್ನು ಈಗಾಗಲೇ ಬಂಧಿಸಿದ್ದ ಜ್ಞಾನ ಭಾರತಿ ಪೊಲೀಸರು ಇದೀಗ ಇನ್ನೋರ್ವನನ್ನೂ ತೆಲಂಗಾಣದಲ್ಲಿ ಬಂಧಿಸಿದ್ದಾರೆ. ಬಂಧಿತರು ಬೆಂಗಳೂರು, ತುಮಕೂರು ಸೇರಿದಂತೆ ಹಲವೆಡೆ ಈ ವಂಚನೆಯ ಜಾಲವನ್ನು ಹರಡಿಸಿದ್ದು, ಎಚ್ಚರದಿಂದಿರುವಂತೆ ಪೊಲೀಸ್ ಕಮಿಶ್ನರ್ ಸಲಹೆ ನೀಡಿದ್ದಾರೆ.
ಬೆಂಗಳೂರು, ಡಿಸೆಂಬರ್ 10: ಬೆಂಗಳೂರು (Bengaluru) ಟೆಕ್ಕಿ ತೇಜಸ್ ಎಂಬವರನ್ನು ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಮೋಸಮಾಡಿ 48 ಲಕ್ಷ ರೂ. ವಂಚಿಸಿದ ವಿಜಯ್ ಗುರೂಜಿಯನ್ನು ಕೆಲ ದಿನಗಳ ಹಿಂದೆಯಷ್ಟೆ ಪೊಲೀಸರು ಬಂಧಿಸಿದ್ದರು. ಇದೀಗ ಗುರೂಜಿಯ ಸಹಚರನನ್ನೂ ಸಹ ಜ್ಞಾನ ಭಾರತಿ ಪೊಲೀಸರು ಅರೆಸ್ಟ್ ಮಾಡಿದ್ದು, ಇಬ್ಬರನ್ನೂ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.
ತೆಲಂಗಾಣದಲ್ಲಿ ಸೆರೆಸಿಕ್ಕ ಆರೋಪಿ
ವಿಜಯ್ ಗುರೂಜಿ ಮತ್ತು ಆತನ ಸಹಚರರಿಂದ ಮೋಸ ಹೋದ ಟೆಕ್ಕಿ ತೇಜಸ್, ತೀವ್ರ ಅನಾರೋಗ್ಯ ಸಮಸ್ಯೆ ಎದುರಾದಾಗ ಪೊಲೀಸರಲ್ಲಿ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ತೆಲಂಗಾಣ ಮೊಹಬೂಬ್ ನಗರದಲ್ಲಿ ವಿಜಯ್ ಗುರೂಜಿಯನ್ನು ಬಂಧಿಸಲಾಗಿತ್ತು. ಇದೀಗ ಆತನ ಸಹಚರ ಮನೋಜ್ ಸಿಂಗ್ ಚಿತ್ತೋಡಿಯಾನನ್ನು ತೆಲಂಗಾಣದ ಸೈಬರಬಾದ್ನಲ್ಲಿ ಸೆರೆಹಿಡಿಯಲಾಗಿದೆ. ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿಗಳು, ಬೆಂಗಳೂರು, ತುಮಕೂರು ಸೇರಿ ಒಟ್ಟು ಎಂಟು ಟೆಂಟ್ ಗಳನ್ನು ಹೊಂದಿದ್ದರೆಂದು ತಿಳಿದು ಬಂದಿದೆ. ಆರೋಪಿಗಳಿಗೆ ಟೆಕ್ಕಿ ನೀಡಿದ್ದ 40 ಲಕ್ಷದಲ್ಲಿ 19.50 ಲಕ್ಷ ಹಣವನ್ನು ವಶಕ್ಕೆ ಪಡೆದ ಪೊಲೀಸರು, ಒಂದು ಟಿ.ಟಿ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ.






