ಸಾವಿನಲ್ಲೂ ಒಂದಾದ ಜೀವದ ಗೆಳತಿಯರು: ಸುಟ್ಟು ಕರಕಲಾದ ನವ್ಯ-ಮಾನಸಳ ಗೆಳೆತನ ಬಿಚ್ಚಿಟ್ಟು ಕಣ್ಣೀರಿಟ್ಟ ತಂದೆ

ಚಿತ್ರದುರ್ಗ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ (Accident) ವರ್ಷದ ಭೀಕರ ದುರಂತದಲ್ಲಿ ಒಂದಾಗಿದೆ. ಕಂಟೇನರ್ ಡಿಕ್ಕಿಯಿಂದ ಖಾಸಗಿ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದಿದೆ. ದುರಂತದಲ್ಲಿ ಒಟ್ಟು 7ಜನ ಸಾವನ್ನಪ್ಪಿದ್ದಾರೆ. ಅದರಲ್ಲೂ ಇನ್ನು ಚನ್ನರಾಯಪಟ್ಟಣ ಮೂಲದ ನವ್ಯ ಹಾಗೂ ಮಾನಸ ಎನ್ನುವ ಕುಚಿಕು ಗೆಳೆಯರು ಸಹ ಸುಟ್ಟು ಕರಕಲಾಗಿದ್ದು, ನವ್ಯಳ ತಂದೆ ಮಂಜಪ್ಪ, ಸುಟ್ಟ ಕರಕಲಾದ ಬಸ್ನಲ್ಲಿ ಮಗಳನ್ನ ಹುಡುಕುತ್ತಿದ್ದು ದೃಶ್ಯ ಮನಕಲಕುವಂತಿತ್ತು. ಇನ್ನು ಇದೀಗ ನವ್ಯ ಹಾಗೂ ಮಾನಸಳ ಗೆಳೆತನ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟು ಕಣ್ಣೀರಿಟ್ಟಿದ್ದಾರೆ. ಹಾಸನ, (ಡಿಸೆಂಬರ್ 26): ಚಿತ್ರದುರ್ಗ (Chitradruga) ಜಿಲ್ಲೆಯ ಹಿರಿಯೂರು ಪಟ್ಟಣದ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ (Bus Incident) ಒಟ್ಟು 7 ಮಂದಿ ಪ್ರಾಣ ಕಳೆದುಕೊಂಡಿದ್ದು, ಸದಾ ಜೊತೆಯಲ್ಲೇ ಇರುತ್ತಿದ್ದ ಹಾಸನದ (Hassan) ಚನ್ನರಾಯಪಟ್ಟಣ ಮೂಲದ ನವ್ಯ ಹಾಗೂ ಮಾನಸ ಸಹ ಸುಟ್ಟು ಕರಕಲಾಗಿದ್ದಾರೆ. ಇದರೊಂದಿಗೆ ಕುಚಿಕು ಗೆಳೆಯರು ಸಾವಿನಲ್ಲೂ ಜೊತೆಯಾಗಿದ್ದಾರೆ. ಇನ್ನು ಮೃತ ಮಗಳು ನವ್ಯ ತಂದೆ ಮಂಜಪ್ಪ ಮಾತನಾಡಿ, ನಿನ್ನೆ ಬೆಳಿಗ್ಗೆ7 ಗಂಟೆಗೆ ನಮಗೆ ವಿಷಯ ತಿಳಿಯಿತು ಅವರು ಮಾನಸ, ನವ್ಯ, ಮಿಲನ ಮೂರು ಜನರು ಹೋಗಿದ್ರು. ಅದರಲ್ಲಿ ಮಿಲನ ಬದುಕಿದ್ದರಿಂದ ನಮಗೆ ಫೋನ್ ಮಾಡಿ ಹೇಳಿದರು. ಹೋಗಿ ನೋಡಿದಾಗ ನಮ್ಮ ಮಗಳು ಹಾಗೂ ಮಾನಸ ಸಂಪೂರ್ಣ ಸುಟ್ಟು ಹೋಗಿದ್ದರು. ನಮ್ಮ ಮಗಳು ಕೂತಿದ್ದ ಸೀಟ್ ಸಮೀಪಕ್ಕೇ ಲಾರಿ ಡಿಕ್ಕಿಯಾಗಿದೆ. ಅವರು ಅದರೊಳಗೇ ಜ್ಞಾನ ತಪ್ಪಿದಾರೆ. ಹಾಗಾಗಿ ಅಲ್ಲೇ ಸುಟ್ಟು ಹೋಗಿದಾರೆ. ಮೃತದೇಹ ಕಂಡು ಹಿಡಿಯಲು ಆಗದ ರೀತಿ ಆಗಿತ್ತು ಎಂದು ಬಿಕ್ಕಿ ಬಿಕ್ಕಿ ಹತ್ತರು. ನವ್ಯ-ಮಾನಸದ ಸ್ನೇಹ ಹೇಗಿತ್ತು? ಇನ್ನು ಮಂಜಪ್ಪ ಅವರು ನವ್ಯ ಹಾಗೂ ಮಾನಸ ಸ್ನೇಹದ ಬಗ್ಗೆ ಎಳೆ ಎಳೆಯಾಗಿ ಬಿಟ್ಟಿದ್ದಾರೆ. ಮಾನಸ ಹಾಗೂ ನವ್ಯ ಒಂದೇ ರೀತಿಯ ಬಟ್ಟೆ ತೆಗೆದುಕೊಳ್ಳುತ್ತಿದ್ದರು. ಒಂದೇ ರೀತಿಯ ಜ್ಯುವೆಲರಿ ಹಾಕಿಕೊಳ್ಳುತ್ತಿದ್ದರು. ಇಬ್ಬರು ಓದಿದ್ದು ಒಂದೇ ಕಾಲೇಜು. ಒಟ್ಟಿಗೆ ಒಂದೇ ಕಡೆ ಕೆಲಸ ಮಾಡುತಿದ್ದರು. ಒಂದೇ ತಟ್ಟೆಯಲ್ಲಿ ಅನ್ನ ತಿನ್ನೋರು. ಎಲ್ಲಿಗೆ ಹೋಗಲಿ ಊರಿಗೆ ಬರಲಿ ಒಟ್ಟಿಗೆ ಓಡಾಡೋರು. ಅವರಿಬ್ಬರು ಒಟ್ಟಿಗೆ ಇದ್ದದ್ದು ನಮಗೂ ಧೈರ್ಯ ಇತ್ತು. ಆದರೆ ದೇವರು ಈ ರೀತಿ ಅನ್ಯಾಯ ಮಾಡಿಬಿಟ್ಟ. ಎರಡು ವರ್ಷದಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಇದ್ದರು. ಜೊತೆಯಲ್ಲೆ ಇದ್ದರು ಈ ಜೊತೆಯಾಗೆ ನಮ್ಮನ್ನ ಬಿಟ್ಟು ಹೋದ್ರು ಎಂದು ಕಣ್ಣೀರಿಟ್ಟರು.
ಉಡುಪಿಯಲ್ಲಿ ಭೀಕರ ಅಪಘಾತ: ಐವರು ಕಾರ್ಮಿಕರು ದುರಂತ ಸಾವು

ಉಡುಪಿ, (ನವೆಂಬರ್ 30): ಕಾರ್ಯಕ್ರಮವೊಂದಕ್ಕೆ ಡೆಕೊರೇಷನ್ ಸಾಮಗ್ರಿ ಸಾಗಿಸುತ್ತಿದ್ದ ಟೆಂಟೋ (Tempo) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇಂದು (ನವೆಂಬರ್ 30) ಉಡುಪಿ (Udupi) ಜಿಲ್ಲೆಯ ಕಾಪು ತಾಲೂಕಿನ ಕೋತಲಕಟ್ಟೆ ಬಳಿ ಈ ದುರ್ಘಟನೆ ಸಂಭವಿಸಿದೆ. ಕಾರ್ಯಕ್ರಮವೊಂದಕ್ಕೆ ಡೆಕೊರೇಷನ್ ಸಾಮಗ್ರಿ ಸಾಗಿಸುತ್ತಿದ್ದ ವೇಳೆ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಹಾರಿ ಸರ್ವಿಸ್ ರಸ್ತೆಗೆ ಉರುಳಿಬಿದ್ದಿದ್ದು, ಟೆಂಪೋನಲ್ಲಿದ್ದ 12 ಕಾರ್ಮಿಕರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಈ ಪೈಕಿ ಐವರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಪಶ್ಚಿಮ ಬಂಗಾಳದ ಕಮಲ್, ಸಮರೇಶ್, ಅಸ್ಸಾಂನ ಪಪ್ಪು ರವಿ ದಾಸ್, ಹರೀಶ್,ತ್ರಿಪುರಾದ ಗಪುನಾತ್ ಮೃತ ಕಾರ್ಮಿಕರು. ಘಟನೆ ನಡೆದದ್ದು ಹೇಗೆ? ಟೆಂಪೋವು ಕಾಪು ಮಜೂರಿನಿಂದ ಮಲ್ಪೆಗೆ ಡೆಕರೋಷನ್ ಕೆಲಸಕ್ಕೆ ಬೇಕಾದ ಸಲಕರಣೆಗಳನ್ನು ಸಾಗಿಸುತ್ತಿತ್ತು. ವಾಹನದಲ್ಲಿ ಒಟ್ಟು 12 ಮಂದಿ ಕಾರ್ಮಿಕರಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಟೆಂಪೋದಲ್ಲಿದ್ದ ಭಾರವಾದ ಕಬ್ಬಿಣದ ಸಲಕರಣೆಗಳು ಕಾರ್ಮಿಕರ ಮೇಲೆ ಬಿದ್ದಿವೆ. ಈ ಪರಿಕರಗಳ ನಡುವೆ ಸಿಲುಕಿ ಉಸಿರುಗಟ್ಟಿ ಉತ್ತರ ಭಾರತದ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದರೆ, ಆಸ್ಪತ್ರೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ವಾಹನದಲ್ಲಿ 12 ಜನರು ಪೈಕಿ ಇನ್ನುಳಿದ ಏಳು ಕಾರ್ಮಿಕರಿಗೆ ಗಂಭೀರಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕಾಪು ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಾಳುಗಳ ಗುರುತು ಪತ್ತೆ ಒಟ್ಟು 12 ಕಾರ್ಮಿಕರಲ್ಲಿ ಐವರು ಸಾವನ್ನಪ್ಪಿದ್ದು, ಇನ್ನುಳಿದ ಏಳು ಗಾಯಾಳುಗಳ ಬಗ್ಗೆ ಕೆಲವರ ಗುರುತು ಪತ್ತೆ ಮಾಡಲಾಗಿದೆ. ಗಣೇಶ್ ಬಹದ್ದೂರ್ ರಾಯ್ 36) ಅಸ್ಸಾಂ ನಿವಾಸಿ ಪ್ರಬಾಸ್ ರಾಯ್ (26) ಪಶ್ಚಿಮ ಬಂಗಾಳದ ಗೋಪಾಲ್ ಭೌಮಿಕ್ (16), ಕಾಪು ಮಜೂರು ನಿವಾಸಿ ರಂಜಿತ್ ಅಮೀನ್ (33) , ಪ.ಬಂಗಾಳದ ಸುಬ್ರದೋ, ಸೂರಜ್ ದೊಲೈ ಎನ್ನುವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದನದಲ್ಲೂ ಪುರುಷೋತ್ತಮ ಬಿಳಿಮಲೆ ಹೇಳಿಕೆ ಸದ್ದು: ಕ್ರಮಕ್ಕೆ BJP ಶಾಸಕರ ಆಗ್ರಹ

ಪುರುಷೋತ್ತಮ ಬಿಳಿಮಲೆ ಅವರ ಯಕ್ಷಗಾನ ಕಲಾವಿದರ ಸಲಿಂಗಕಾಮ ಕುರಿತ ಹೇಳಿಕೆ ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿದೆ. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಶಾಸಕರು, ಬಿಳಿಮಲೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನಲೆ ಬಿಳಿಮಲೆ ಅವರಿಗೆ ನೋಟಿಸ್ ನೀಡಿ ಸ್ಪಷ್ಟನೆ ಕೇಳಲು ಸರ್ಕಾರಕ್ಕೆ ಸ್ಪೀಕರ್ ಸೂಚಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಆಡಿದ್ದ ಮಾತುಗಳು ಭಾರಿ ವಿವಾದ ಸೃಷ್ಟಿಸಿದ್ದವು. ಬೆಳಗಾವಿ, ಡಿಸೆಂಬರ್ 10: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳಾಗಿದ್ದು, ಅಲ್ಲಿ ಅಂಥ ಅನಿವಾರ್ಯತೆ ಇದೆ ಎಂದು ಹೇಳಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ಹೇಳಿಕೆ ವಿಧಾನ ಸಭೆಯಲ್ಲೂ ಪ್ರತಿಧ್ವನಿಸಿದೆ. ಗಮನ ಸೆಳೆಯುವ ಸೂಚನೆ ವೇಳೆ ಈ ಬಗ್ಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರಸ್ತಾಪಿಸಿದ್ದು, ಬಿಳಿಮಲೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ ನೋಟಿಸ್ ಕೊಟ್ಟು ಸ್ಪಷ್ಟನೆ ಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ಪುರುಷೋತ್ತಮ ಬಿಳಿಮಲೆ ಅವರನ್ನು ವಜಾ ಮಾಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಗ್ರಹ ವ್ಯಕ್ತಪಡಿಸಿದ್ದಾರೆ. ಈ ವೇಳೆ ನೋಟಿಸ್ ಕೊಟ್ಟು ವಿವರಣೆ ಕೇಳುವಂತೆ ಸರ್ಕಾರಕ್ಕೆ ಸ್ಪೀಕರ್ ಯು.ಟಿ. ಖಾದರ್ ಸೂಚನೆ ನೀಡಿದ್ದು, ಮುಂದೆ ಯಾರೂ ಆಕ್ಷೇಪಾರ್ಹ ಹೇಳಿಕೆ ಕೊಡದಂತೆ ಕ್ರಮ ಕೈಗೊಳ್ಳುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು; ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸತ್ಯವನ್ನು ಹೇಳಲು ಹಿಂಜರಿಯಬಾರದು. ಯಕ್ಷಗಾನ ಕಲಾವಿದರು ಮೇಳಕ್ಕೆಂದು 6-8 ತಿಂಗಳು ತಿರುಗಾಟದಲ್ಲೇ ಇರುವುದರಿಂದ ಅವರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿಗಳೂ ಒತ್ತಡದಲ್ಲಿರುತ್ತಿದ್ದರು. ಅವರ ಮೇಲೆ ಇತರರಿಗೆ ಮೋಹವೇ ಇರುತ್ತಿತ್ತು. ಸ್ತ್ರೀವೇಷದ ಕಲಾವಿದ ಏನಾದರೂ ಸಲಿಂಗಕಾಮ ನಿರಾಕರಿಸಿದ್ದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ಆ ಮೂಲಕ ರಂಗಭೂಮಿ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗ್ತಿತ್ತು ಎಂದಿದ್ದರು. ತಮ್ಮ ಹೇಳಿಕೆ ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಆ ಬಗ್ಗೆ ಬಿಳಿಮಲೆ ಅವರು ಕ್ಷಮೆ ಕೇಳಿದ್ದರು. ಜೊತೆಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಅವರು, ಕೆಲ ಯಕ್ಷಗಾನ ಕಲಾವಿದರು ಸಲಿಂಗಿಗಳು ಹೌದು. ಈ ವಿಚಾರವನ್ನು ನಾನು ಹೊಸದಾಗಿ ಹೇಳುತ್ತಿಲ್ಲ. ನನ್ನ ಉದ್ದೇಶ ಕಲಾವಿದರ ಬದುಕು ಉಜ್ವಲಗೊಳಿಸುವುದು. ಹೀಗಾಗಿ ನನ್ನ ಹೇಳಿಕೆಯಿಂದ ಕಲಾವಿದರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಯಕ್ಷಗಾನ ಕಲಾವಿದರು, ಅಭಿಮಾನಿಗಳಲ್ಲಿ ವಿಷಾದ ವ್ಯಕ್ತಪಡಿಸುವೆ ಎಂದಿದ್ದರು. ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಮೆಟ್ರೋ ಪ್ರಯಾಣಿಕರಿಗೆ ಕ್ರಿಸ್ಮಸ್, ಹೊಸ ವರ್ಷದ ಗಿಫ್ಟ್: 12 ನಿಮಿಷಕ್ಕೊಂದರಂತೆ ಸಂಚರಿಲಿದೆ ಯೆಲ್ಲೋ ಲೈನ್ ಮೆಟ್ರೋ

Namma Metro Yellow Line: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಆರನೇ ರೈಲು ಸಂಚಾರ ಇದೇ 22 ರಿಂದ ಆರಭವಾಗುವ ಸಾಧ್ಯತೆ ಇದೆ. ಇದರಿಂದಾಗಿ ಪ್ರತಿ 12 ನಿಮಿಷಕ್ಕೊದರಂತೆರೈಲುಗಳು ಸಂಚಾರ ಮಾಡಲಿವೆ. ಆದರೆ, ಯೆಲ್ಲೋ ಲೈನ್ನಲ್ಲಿ ಬೆಳಗ್ಗೆ 6ಕ್ಕೆ ಶುರುವಾಗುವ ಮೆಟ್ರೋ ಸಂಚಾರ ಅದೇ ರೀತಿ ಮುಂದುವರಿಯಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ. ಬೆಂಗಳೂರು, ಡಿಸೆಂಬರ್ 11: ನಮ್ಮ ಮೆಟ್ರೋ ಯೆಲ್ಲೋ ಲೈನ್ (Namma Metro Yellow Line) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಕ್ರಿಸ್ಮಸ್, ಹೊಸ ವರ್ಷದ ಉಡುಗೊರೆ ನೀಡಿದೆ. ಡಿಸೆಂಬರ್ 22 ರಿಂದ ಹಳದಿ ಮಾರ್ಗ ಮೆಟ್ರೋದಲ್ಲಿ ಆರನೇ ರೈಲು ಸಂಚಾರ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಹಳದಿ ಮಾರ್ಗದಲ್ಲಿ ರೈಲುಗಳು ಪ್ರತಿ 12 ನಿಮಿಷಗಳಿಗೊಮ್ಮೆ ಸಂಚಾರ ಮಾಡಲಿವೆ. ನವೆಂಬರ್ ಕೊನೆಯ ವಾರದಲ್ಲಿ ಆರು ಬೋಗಿಗಳ ಆರನೇ ರೈಲನ್ನು ಬಿಎಂಆರ್‌ಸಿಎಲ್ ಸ್ವೀಕರಿಸಿತ್ತು. ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಜತೆಗಿನ ಒಪ್ಪಂದದ ಅಡಿಯಲ್ಲಿ ಟಿಟಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ಕೋಲ್ಕತ್ತಾ ಬಳಿ ಈ ಬೋಗಿಗಳನ್ನು ತಯಾರಿಸಿದೆ. ಒಪ್ಪಂದದ ಭಾಗವಾಗಿ ಟಿಆರ್‌ಎಸ್‌ಎಲ್ ಒಟ್ಟು 36 ರೈಲುಗಳನ್ನು 1,578 ಕೋಟಿ ರೂ.ಗಳಿಗೆ ಪೂರೈಸುತ್ತಿದೆ. ಆರನೇ ರೈಲು ಪ್ರಯಾಣಿಕರ ಸೇವೆಗೆ ಲಭ್ಯವಾಗುವ ಮೊದಲು ಸಿಗ್ನಲಿಂಗ್ ಇಂಟರ್ಫೇಸ್ ಟೆಸ್ಟ್ಗಳ ಜೊತೆಗೆ 750 ಕಿಮೀ ಸಂಚಾರವನ್ನು ಪೂರ್ಣಗೊಳಿಸಬೇಕಾಗಿದೆ. ಕ್ರಿಸ್‌ಮಸ್‌ಗೆ ಮುಂಚಿತವಾಗಿ, ಡಿಸೆಂಬರ್ 22 ರಂದು ರೈಲು ಸಂಚಾರ ಆರಂಭಿಸಲು ಪ್ರಯತ್ನಗಳು ನಡೆಯುತ್ತಿವೆ ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಮ್ಮ ಮೆಟ್ರೋ ಹಳದಿ ಲೈನ್ನಲ್ಲಿ ಬೆಳಗ್ಗೆ 5ಕ್ಕೇ ಶುರುವಾಗುತ್ತಾ ಸಂಚಾರ? ಪೀಕ್-ಅವರ್ ಸಂಚಾರವನ್ನು ಪ್ರತಿ 12 ನಿಮಿಷಕ್ಕೆ ಒಂದರಂತೆ ಮಾಡಿದರೂ ಬೆಳಗ್ಗೆ ಸಂಚಾರ ಶುರುವಾಗುವ ಸಮಯ ಯಥಾಪ್ರಕಾರ (ಬೆಳ್ಗೆ 6 ಗಂಟೆ) ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ನಮ್ಮ ಮೆಟ್ರೋದ ಇತರ ಮಾರ್ಗಗಳಲ್ಲಿ ಬೆಳಗ್ಗೆ 5ಕ್ಕೇ ಮೆಟ್ರೋ ರೈಲು ಸಂಚಾರ ಆರಂಭವಾಗುತ್ತದೆ. ಇದನ್ನೂ ಓದಿ: ನಿಗದಿತ ಅವಧಿಯೊಳಗೆ ಮೆಟ್ರೋ ನೀಲಿ ಮಾರ್ಗ ಕಾಮಗಾರಿ ಮುಗಿಯಬೇಕು, ಇಲ್ಲವಾದ್ರೆ ಮುಂದೆ ಕಾಮಗಾರಿ ನೀಡಲ್ಲ: ಗುತ್ತಿಗೆದಾರರಿಗೆ ಡಿಸಿಎಂ ಎಚ್ಚರಿಕೆ 19.15 ಕಿ.ಮೀ. ಉದ್ದದ ಆರ್‌ವಿ ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆಗಸ್ಟ್ 11 ರಿಂದ ಆರಂಭವಾಗಿದೆ. ಇದು ಮೆಟ್ರೋದ ದೈನಂದಿನ ಪ್ರಯಾಣಿಕರ ಸಂಖ್ಯೆಯನ್ನು 10 ಲಕ್ಷ ದಾಟುವಂತೆ ಮಾಡಿದೆ. ಆದರೆ ಹಳದಿ ಮಾರ್ಗದಲ್ಲಿ ಕಡಿಮೆ ರಲುಗಳ ಸಂಚಾರ ಮತ್ತು ಬೆಳಗ್ಗೆ ತಡವಾಗಿ ಪ್ರಾರಂಭವಾಗುವ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಮೆಟ್ರೋ ಹಳದಿ ಲೈನ್ನಲ್ಲಿ ಪೀಕ್-ಅವರ್ನಲ್ಲಿ 15 ನಿಮಿಷಕ್ಕೆ ಒಂದರಂತೆ ರೈಲುಗಳು ಸಂಚರಿಸುತ್ತವೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ಗಾಳಿಯ ಗುಣಮಟ್ಟ ತೀವ್ರ ಕುಸಿತ: ಉಸಿರಾಟ ಸಂಬಂಧಿ ಸಮಸ್ಯೆ ಹೆಚ್ಚಳದ ಆತಂಕ

ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಮಟ್ಟ ಗಂಭೀರವಾಗಿದ್ದು, ಗಾಳಿಯ ಗುಣಮಟ್ಟ ಸೂಚ್ಯಂಕ (AQI) 180ಕ್ಕೆ ತಲುಪಿದೆ. ವಾಹನ ದಟ್ಟಣೆ, ನಿರ್ಮಾಣ ಕಾರ್ಯಗಳು ಮತ್ತು ಚಳಿಗಾಲ ಇದಕ್ಕೆ ಪ್ರಮುಖ ಕಾರಣ. ಇದರಿಂದ ಉಸಿರಾಟದ ತೊಂದರೆಗಳುಂಟಾಗಬಹುದು. ಮುಂದಿನ ಕೆಲವು ದಿನಗಳವರೆಗೆ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಸಾರ್ವಜನಿಕರು ಮಾಸ್ಕ್ ಧರಿಸಿ, ಹೊರಗೆ ಹೋಗುವುದನ್ನು ತಪ್ಪಿಸಿ ಎಚ್ಚರ ವಹಿಸಬೇಕು ಎಂದು ಹೇಳಲಾಗಿದೆ. ಬೆಂಗಳೂರು, ಡಿ.11: ಬೆಂಗಳೂರಿನಲ್ಲಿ ಮೂರು ದಿನದಿಂದ ಗಾಳಿಯ ಗುಣಮಟ್ಟದಲ್ಲಿ (Bangalore Air Quality Alert) ವ್ಯತ್ಯಾಸ ಕಂಡು ಬಂದಿದೆ, ಬೆಂಗಳೂರಿನ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಿದೆ. ಗಾಳಿಯ ಗುಣಮಟ್ಟ ಅನಾರೋಗ್ಯಕರವಾಗಿದ್ದು 180ಕ್ಕೆ ತಲುಪಿದೆ. ಇದರಿಂದ ಇದೀಗ ಜನರು ಆತಂಕ ಪಡುವಂತಾಗಿದೆ. ಬೆಂಗಳೂರಿನ ಗಾಳಿಯಲ್ಲಿ ಉಂಟಾದ ಅಶುದ್ಧತೆಯಿಂದ ಉಸಿರಾಟ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಚಳಿಗಾಲ ಎಂದು ಹೇಳಲಾಗಿದೆ. ಇದರ ಜತೆಗೆ ವಾಹನ ದಟ್ಟಣೆ ಮತ್ತು ನಿರ್ಮಾಣ ಕಾರ್ಯಗಳಿಂದ ಈ ಸ್ಥಿತಿ ಉಂಟಾಗಿದೆ ಎಂದು ಹೇಳಲಾಗಿದೆ. ಇನ್ನು ಬೆಂಗಳೂರಿನಲ್ಲಿ ಇಂದು ಚಳಿಯ ವಾತಾವರಣವಿದ್ದು, ಇದು ಅನಾರೋಗ್ಯ ಪೀಡಿತರ ಮೇಲೆ ಹಾಗೂ ಯುವಕರು, ಮಕ್ಕಳ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟು ಮಾಡಬಹುದು. ಅದಕ್ಕಾಗಿ ಹೆಚ್ಚು ಹೊರಗಡೆ ಹೋಗುವುದನ್ನು ತಪ್ಪಿಸುವುದೇ ಇದಕ್ಕೆ ಉತ್ತಮ ಪರಿಹಾರ ಹಾಗೂ ಬಿಸಿ ತೇವಾಂಶ ಇರುವ ವಸ್ತುಗಳನ್ನು ಬಳಸುವುದು ಉತ್ತಮ ಎಂದು ಹೇಳಲಾಗಿದೆ. ದೆಹಲಿಗಿಂತ ಬೆಂಗಳೂರಿನ ವಾತಾವರಣ ಉತ್ತಮವಾಗಿದ್ದರೂ, ಸೂಚ್ಯಂಕದ ಪ್ರಕಾರ ಇದು ಕಳಪೆ ಗಾಳಿಯಾಗಿರುವ ಕಾರಣ ಎಚ್ಚರ ವಹಿಸುವುದು ಅಗತ್ಯ. ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 90-180ಕ್ಕೆ ತಲುಪಿದೆ. ಇದು ಅನಾರೋಗ್ಯಕರ ಸ್ಥಿತಿ ಎಂದು ಹೇಳಲಾಗಿದೆ. PM2.5 (ಸೂಕ್ಷ್ಮ ಕಣಗಳು) ಮತ್ತು PM10 ಪ್ರಮುಖವಾಗಿವೆ, ಜೊತೆಗೆ ಸಾರಜನಕ ಡೈಆಕ್ಸೈಡ್ ಗಾಳಿಯ ಮಟ್ಟವನ್ನು ಕುಗ್ಗಿಸಿದೆ. ವಾಹನಗಳಿಂದ ಹೊರಸೂಸುವ ಹೊಗೆ ಮತ್ತು ನಡೆಯುತ್ತಿರುವ ನಿರ್ಮಾಣ ಕಾರ್ಯಗಳಿಂದ ಗಾಳಿಯ ಗುಣಮಟ್ಟದ ಹದಗೆಡಲು ಕಾರಣ ಎಂದು ಹೇಳಲಾಗಿದೆ. ಇದರ ಜತೆಗೆ ಚಳಿಗಾಲ ಆಗಿರುವ ಕಾರಣ ಈ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದ ಉಸಿರಾಟದ ತೊಂದರೆ ಮತ್ತು ಗಂಟಲಿನ ಕಿರಿಕಿರಿಯನ್ನು ಉಂಟುಮಾಡಬಹುದು, ವಿಶೇಷವಾಗಿ ಯುವಕರು, ವೃದ್ಧರಲ್ಲಿ ಉಸಿರಾಟದ ಸಮಸ್ಯೆ ಕಂಡು ಬರಬಹುದು. ಇನ್ನು ಇಂತಹ ಗಾಳಿಯ ಗುಣಮಟ್ಟದಿಂದ ಯುವಕರ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ವರದಿಗಳು ಹೇಳಿದೆ. ಮುಂದಿನ 4 ದಿನ ಗಾಳಿಯ ಗುಣಮಟ್ಟ: ಇಂದು ಗಾಳಿಯ ಗುಣಮಟ್ಟ 180ಕ್ಕೆ ತಲುಪಿದೆ. ಇದು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದು ಹೆಚ್ಚು ಅಪಾಯಕಾರಿ ಗಾಳಿಯ ಮಟ್ಟದ ಎಂದು ಹೇಳಲಾಗಿದೆ. ನಾಳೆ (ಡಿ.12) ಗಾಳಿಯ ಗುಣಮಟ್ಟ 156ಕ್ಕಿಂತ ಹೆಚ್ಚಿರಬಹುದು. ಇದರಿಂದ ಕೂಡ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಆರೋಗ್ಯವಂತ ವ್ಯಕ್ತಿಗಳು ಉಸಿರಾಟದ ತೊಂದರೆ ಮತ್ತು ಗಂಟಲಿನ ಕಿರಿಕಿರಿಯನ್ನು ಅನುಭವಿಸುವ ಸಾಧ್ಯತೆಯಿದೆ. ಶನಿವಾರ (ಡಿ.13) ಗಾಳಿಯ ಗುಣಮಟ್ಟ 157ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದರಿಂದಲ್ಲೂ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಉಂಟು ಮಾಡುಬಹುದು. ಇನ್ನು ಭಾನುವಾರ (ಡಿ.14) ಗಾಳಿಯ ಗುಣಮಟ್ಟ 171ಕ್ಕೆ ತಲುಪಲಿದೆ ಎಂದು ಹೇಳಲಾಗಿದೆ. ಜನರು ಈ ಮೂರು ದಿನವೂ ಎಚ್ಚರಿಕೆಯಿಂದ ಇರಬೇಕು ಹಾಗೂ ಆರೋಗ್ಯದ ಬಗ್ಗೆ ಗಮನ ನೀಡಬೇಕು ಎಂದು ಹೇಳಲಾಗಿದೆ. ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ ಹಲವೆಡೆ ಮಳೆಯಾಗುವ ಸಾಧ್ಯತೆ ಈ ಮಾಲಿನ್ಯಕ್ಕೆ ಪ್ರಮುಖ ಕಾರಣ: ಅತಿ ಹೆಚ್ಚು ವಾಹನ ದಟ್ಟಣೆಯಿಂದ ಈ ಸಮಸ್ಯೆ ಉಂಟಾಗಿದೆ. ಇಂಧನ ದಹನದಿಂದ ಹೊರಸೂಸುವ ಗಾಳಿಯಿಂದ ಮಾಲಿನ್ಯಕಾರಕಕ್ಕೆ ಕಾರಣವಾಗಿದೆ. ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿಗಳಿಂದಲ್ಲೂ ಪರಿಸರ ಮಾಲಿನ್ಯ ಉಂಟಾಗಿದೆ. ಜತೆಗೆ ತ್ಯಾಜ್ಯ ಸುಡುವುದರಿಂದ ಈ ಸಮಸ್ಯೆ ಉಂಟಾಗಿದೆ. ಹೊರಗೆ ಹೋಗಬೇಕಾದರೆ ಮಾಸ್ಕ್ಗಳನ್ನು ಧರಿಸುವುದು ಉತ್ತಮ, ಹೆಚ್ಚಾಗಿ ಬಿಸಿ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ. ಉತ್ತರ ಕರ್ನಾಟಕ ಗಾಳಿಮಟ್ಟದಲ್ಲಿ ವ್ಯತ್ಯಾಸ: ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಶೀತಗಾಳಿ ಬೀಸಿದ್ದು, ಸಸ್ಯಗಳಲ್ಲಿ ಶಿಲೀಂಧ್ರ ರೋಗಗಳನ್ನು ಪ್ರಚೋದಿಸುವುದರ ಜೊತೆಗೆ ಜನರಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸೇರಿದಂತೆ ಹೆಚ್ಚಿನ ಭಾಗಗಳಲ್ಲಿ ಜನರು ರಾತ್ರಿಯಲ್ಲಿ ಕೊರೆಯುವ ಚಳಿಯಿಂದಾಗಿ ಮನೆಯಿಂದ ಹೊರಗೆಯೇ ಬಂದಿಲ್ಲ. ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೈಕ್ರೋಸಾಫ್ಟ್ ಸಪೋರ್ಟ್ ಹೆಸರಲ್ಲಿ ಭಾರೀ ವಂಚನೆ: ಅಮೆರಿಕ, ಬ್ರಿಟನ್ ಪ್ರಜೆಗಳ ಕೋಟ್ಯಂತರ ರೂ. ದೋಚಿದ ಬೆಂಗಳೂರು ಗ್ಯಾಂಗ್!

ಬೆಂಗಳೂರಿನ ಸೈಬರ್ ವಂಚಕರ ಗ್ಯಾಂಗ್ ಮೈಕ್ರೋಸಾಫ್ಟ್ ಸಪೋರ್ಟ್ ಹೆಸರಿನಲ್ಲಿ ಅಮೆರಿಕ ಮತ್ತು ಬ್ರಿಟನ್ ಪ್ರಜೆಗಳಿಂದ ಕೋಟ್ಯಂತರ ರೂ. ದೋಚಿರುವುದು ಬಯಲಾಗಿದೆ. ಸಂತ್ರಸ್ತರನ್ನು ಬಿಟ್‌ಕಾಯಿನ್ ಎಟಿಎಂಗಳಲ್ಲಿ ಹಣ ಠೇವಣಿ ಇಡುವಂತೆ ಮಾಡಿ ವಂಚನೆ ಎಸಗಲಾಗಿದೆ. ಈ ಪ್ರಕರಣದಲ್ಲಿ 22 ಮಂದಿ ಬಂಧಿತರಾಗಿದ್ದು, ಸುಮಾರು 150ಕ್ಕೂ ಹೆಚ್ಚು ಜನ ವಂಚನೆಗೊಳಗಾಗಿದ್ದಾರೆ. ಬೆಂಗಳೂರು, ಡಿಸೆಂಬರ್ 11: ಮೈಕ್ರೋಸಾಫ್ಟ್ ಸಪೋರ್ಟ್ ಹೆಸರಲ್ಲಿ ಬೆಂಗಳೂರಿನ (Bengaluru) ಸೈಬರ್ ವಂಚಕರ ಗ್ಯಾಂಗ್ ಅಮೆರಿಕ ಮತ್ತು ಬ್ರಿಟನ್ ಪ್ರಜೆಗಳಿಂದ ಕೋಟ್ಯಂತರ ರೂ. ದೋಚಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳ ತನಿಖೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಯಲಾಗಿದ್ದು, ವಂಚಕರು ಆಗಸ್ಟ್‌ನಿಂದ ಸುಮಾರು 150 ಮಂದಿಯನ್ನು ಗುರಿಯಾಗಿಸಿಕೊಂಡಿದ್ದರು. ಸಂತ್ರಸ್ತರಿಂದ ತಲಾ 13.5 ಕೋಟಿ ರೂ. ದೋಚಿದ್ದಾರೆ ಎಂಬುದು ತನಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವೈಟ್ಫೀಲ್ಡ್ನಲ್ಲಿ 21 ಮಂದಿಯ ಬಂಧಿಸಿದ್ದ ಬೆಂಗಳೂರು ಪೊಲೀಸ್ ಕಳೆದ ತಿಂಗಳು ವೈಟ್‌ಫೀಲ್ಡ್‌ನಲ್ಲಿರುವ ‘ಮಸ್ಕ್ ಕಮ್ಯುನಿಕೇಷನ್ಸ್’ ಮೇಲೆ ದಾಳಿ ನಡೆಸಿದ್ದ ಪೊಲೀಸರು 21 ಮಂದಿ ಶಂಕಿತರನ್ನು ಬಂಧಿಸಿದ್ದರು. ವಂಚಕರು ಮೈಕ್ರೋಸಾಫ್ಟ್ ಟೆಕ್ನಿಕಲ್ ಸಪೋರ್ಟ್ ಸಿಬ್ಬಂದಿಯ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದರು. ಅದಕ್ಕಾಗಿ ನಕಲಿ ‘ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ)’ ಉಲ್ಲಂಘನೆಗಳನ್ನು ಉಲ್ಲೇಖಿಸಿದ್ದರು. ಅಹಮದಾಬಾದ್‌ನ ರವಿ ಚೌಹಾಣ್ ಬಂಧನ ಇದೇ ಪ್ರಕರಣ ಸಂಬಂಧ ಪೊಲೀಸರು ಅಹಮದಾಬಾದ್‌ನ ರವಿ ಚೌಹಾಣ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತ ನಕಲಿ ಮೈಕ್ರೋಸಾಫ್ಟ್ ಸಪೋರ್ಟ್ ಸೆಂಟರ್ಗೆಂದೇ ಬೆಂಗಳೂರಿನಲ್ಲಿ ಸುಮಾರು 85 ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದ. ರವಿ ಚೌಹಾಣ್ ಬಂಧನೊಂದಿಗೆ, ಈ ಪ್ರಕರಣ ಸಂಬಂಧ ಅರೆಸ್ಟ್ ಆದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಪೊಲೀಸ್ ಅಧಿಕಾರಿಗಳು ಹೇಳಿದ್ದೇನು? ಆರೋಪಿಗಳು ಸಂತ್ರಸ್ತರಿಂದ ಬಿಟ್‌ಕಾಯಿನ್‌ಗಳನ್ನು ಬಿಟ್‌ಕಾಯಿನ್ ಎಟಿಎಂಗಳಲ್ಲಿ (ಬಿಟ್‌ಕಾಯಿನ್ ಎಟಿಎಂಗಳು ಬಿಟ್‌ಕಾಯಿನ್ ನೆಟ್‌ವರ್ಕ್‌ಗೆ ಸಂಪರ್ಕ ಸಾಧಿಸುವ ಕಿಯೋಸ್ಕ್‌ಗಳಾಗಿದ್ದು, ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ.) ಠೇವಣಿ ಇಡುವಂತೆ ಮಾಡಿದ್ದಾರೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಸಂತ್ರಸ್ತ ಗ್ರಾಹಕರ ಬ್ಯಾಂಕ್ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಈವರೆಗೆ ಬ್ರಿಟನ್ ಮತ್ತು ಅಮೆರಿಕದ ಕನಿಷ್ಠ 150 ಮಂದಿ ವಿವಿಧ ಬಿಟ್‌ಕಾಯಿನ್ ಎಟಿಎಂಗಳಲ್ಲಿ ಸುಮಾರು 10,000 ಡಾಲರ್ ಠೇವಣಿ ಇಟ್ಟಿರುವುದು ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಇಡೀ ರಾಜ್ಯದಲ್ಲಿ ಹಬ್ಬಿದ್ದ ನಕಲಿ ಲೈಂಗಿಕ ಔಷಧಿ ಜಾಲ; ಗುಜರಾತ್ ಮೂಲದ ಆರೋಪಿ ಮನೋಜ್ ಅಂದರ್ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಪೊಲೀಸ್ ಸೈಬರ್ ಕಮಾಂಡ್‌ನ ವಿಶೇಷ ಘಟಕದ ತಂಡಗಳು ಮತ್ತು ವೈಟ್‌ಫೀಲ್ಡ್ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ನವೆಂಬರ್ 14 ಮತ್ತು ನವೆಂಬರ್ 15 ರಂದು ವೈಟ್‌ಫೀಲ್ಡ್ ಮುಖ್ಯ ರಸ್ತೆಯ ಸಿಗ್ಮಾ ಸಾಫ್ಟ್ ಟೆಕ್ ಪಾರ್ಕ್‌ನಲ್ಲಿರುವ ಡೆಲ್ಟಾ ಕಟ್ಟಡದ 6 ನೇ ಮಹಡಿಯಲ್ಲಿರುವ ಮಸ್ಕ್ ಕಮ್ಯುನಿಕೇಷನ್ಸ್ ಕಚೇರಿಯ ಮೇಲೆ ದಾಳಿ ನಡೆಸಿದ್ದರು. ಎರಡು ದಿನಗಳ ಕಾರ್ಯಾಚರಣೆಯಲ್ಲಿ ವಂಚನೆಗೆ ಬಳಸಿದ್ದ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಹಾರ್ಡ್ ಡಿಸ್ಕ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕಚೇರಿಯಲ್ಲಿದ್ದ ಎಲ್ಲಾ 21 ಸಿಬ್ಬಂದಿಯನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೂವರು ಮಕ್ಕಳನ್ನು ಸ್ನೇಹಿತನ ಬಳಿ ಬಿಟ್ಟು ಫಿಲ್ಮ್ ನೋಡಲು ಹೋಗಿದ್ದ ದಂಪತಿ, ಬರುವಷ್ಟರಲ್ಲಿ ಒಂದು ಮಗು ಕಿಡ್ನ್ಯಾಪ್

ಮೂವರು ಮಕ್ಕಳನ್ನು ಸ್ನೇಹಿತನ ಬಳಿ ಬಿಟ್ಟು ಫಿಲ್ಮ್ ನೋಡಲು ಹೋಗಿದ್ದ ದಂಪತಿ ಹಿಂದಿರುಗುವಷ್ಟರಲ್ಲಿ ಕೆಟ್ಟ ಸುದ್ದಿಯೊಂದು ಕಾದಿತ್ತು. ದಂಪತಿ ಒಟ್ಟಿಗೆ ಎಲ್ಲೂ ಹೋಗದೆ ತುಂಬಾ ದಿನವಾಗಿತ್ತೆಂದು ಮೂವರು ಮಕ್ಕಳನ್ನು ಸ್ನೇಹಿತ ರಾಜೇಶ್ ಮನೆಯಲ್ಲಿ ಬಿಟ್ಟು ಚಲನಚಿತ್ರ ವೀಕ್ಷಿಸಲು ಹೋಗಿದ್ದರು. ಅವರು ಹಿಂದಿರುಗಿ ಬರುವಷ್ಟರಲ್ಲಿ ಒಂದು ಮಗುವಿನ ಅಪಹರಣವಾಗಿತ್ತು. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮುಂಬೈ, ಡಿಸೆಂಬರ್ 11: ಮೂವರು ಮಕ್ಕಳನ್ನು ಸ್ನೇಹಿತನ ಬಳಿ ಬಿಟ್ಟು ಫಿಲ್ಮ್ ನೋಡಲು ಹೋಗಿದ್ದ ದಂಪತಿ ಹಿಂದಿರುಗುವಷ್ಟರಲ್ಲಿ ಕೆಟ್ಟ ಸುದ್ದಿಯೊಂದು ಕಾದಿತ್ತು. ದಂಪತಿ ಒಟ್ಟಿಗೆ ಎಲ್ಲೂ ಹೋಗದೆ ತುಂಬಾ ದಿನವಾಗಿತ್ತೆಂದು ಮೂವರು ಮಕ್ಕಳನ್ನು ಸ್ನೇಹಿತ ರಾಜೇಶ್ ಮನೆಯಲ್ಲಿ ಬಿಟ್ಟು ಚಲನಚಿತ್ರ ವೀಕ್ಷಿಸಲು ಹೋಗಿದ್ದರು. ಅವರು ಹಿಂದಿರುಗಿ ಬರುವಷ್ಟರಲ್ಲಿ ಒಂದು ಮಗುವಿನ ಅಪಹರಣ(Kidnap)ವಾಗಿತ್ತು. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇದೀಗ 24 ಗಂಟೆಗಳ ಒಳಗಾಗಿ ಅಪಹೃತವಾಗಿದ್ದ 2 ವರ್ಷದ ಬಾಲಕಿಯನ್ನು ಥಾಣೆ ಸರ್ಕಾರಿ ರೈಲ್ವೆ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಘಾಟ್ಕೋಪರ್‌ನ ನಿತ್ಯಾನಂದ ನಗರದ 30 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 137(2) (ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಡಿಸೆಂಬರ್ 8, 2025 ರಂದು, ರಾತ್ರಿ 8.30 ರ ಸುಮಾರಿಗೆ ಮಹಿಳೆ ಪತಿಯೊಂದಿಗೆ ಹೊರಗೆ ಹೋಗಿದ್ದರು. ಸಿನಿಮಾ ಮತ್ತು ಭೋಜನದ ನಂತರ, ದಂಪತಿ ಡಿಸೆಂಬರ್ 9 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಥಾಣೆ ರೈಲ್ವೆ ನಿಲ್ದಾಣಕ್ಕೆ ಹಿಂತಿರುಗಿದ್ದರು. ಕಲ್ಯಾಣ್-ಕೊನೆಯ ಪಾದಚಾರಿ ಮೇಲ್ಸೇತುವೆಯ ಬಳಿ ಪ್ಲಾಟ್‌ಫಾರ್ಮ್ ಸಂಖ್ಯೆ 8 ರ ಬಳಿ ಕಾಯುತ್ತಿದ್ದ ರಾಜೇಶ್ ಅವರಿಂದ ತಮ್ಮ ಮಕ್ಕಳನ್ನು ಕರೆದುಕೊಂಡು ಬರಲು ಹೋದರು. ಆದರೆ ಒಂದು ಮಗು ಎಲ್ಲೂ ಕಾಣಿಸಲಿಲ್ಲ. ಮತ್ತಷ್ಟು ಓದಿ: ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಬಾಲಕನನ್ನು ಅಪಹರಿಸಿದ್ರಾ ಪೊಲೀಸರು? ರಾಜೇಶ್ ಬಳಿ ವಿಚಾರಿಸಿದಾಗ ತಮಗೆ ಪರಿಚಯವಿದ್ದ 14 ವರ್ಷದ ಬಾಲಕಿ ಮಗುವನ್ನು ಕರೆದುಕೊಂಡು ಹೋಗಿದ್ದಾಳೆ. ಆದರೆ ಇಷ್ಟು ಹೊತ್ತಾದರೂ ವಾಪಸ್ ಬರಲೇ ಇಲ್ಲ ಎನ್ನುವ ವಿಚಾರವನ್ನು ಪೋಷಕರಿಗೆ ರಾಜೇಶ್ ತಿಳಿಸಿದ್ದಾರೆ. ಎಲ್ಲೆಡೆ ತೀವ್ರ ಹುಟುಕಾಟ ನಡೆಸಲಾಯಿತು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಚಿಂತಿತರಾದ ಪೋಷಕರು ಅಪಹರಣ ದೂರು ದಾಖಲಿಸಿದ್ದರು. ತ್ವರಿತವಾಗಿ ಕಾರ್ಯನಿರ್ವಹಿಸಿದ ಥಾಣೆ ರೈಲ್ವೆ ಪೊಲೀಸರ ಅಪರಾಧ ಪತ್ತೆ ಘಟಕವು ಕಲ್ಯಾಣ್, ಅಂಬರ್ನಾಥ್ ಮತ್ತು ಇತರ ಶಂಕಿತ ಸ್ಥಳಗಳಲ್ಲಿ ಸಂಘಟಿತ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮಾಹಿತಿದಾರರಿಂದ ಬಂದ ಮಾಹಿತಿಗಳನ್ನು ಬಳಸಿಕೊಂಡು, ತಂಡವು ಡಿಸೆಂಬರ್ 9 ರಂದು ಅಂಬರ್ನಾಥ್ ರೈಲು ನಿಲ್ದಾಣದ ಹೊರ ಪ್ರದೇಶದ ಬಳಿ ಬಾಲಕಿ ಮತ್ತು ಮಗುವನ್ನು ಪತ್ತೆಹಚ್ಚಿತು. ಅಪಹರಣದ ಕುರಿತು ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೇವಲ 2 ಲಕ್ಷ ರೂ. ಕೊಟ್ಟರೆ ಸಾಕು ಕಳ್ಳತನದ ಪಾಠ, ಇದೆಂಥಾ ಕಾಲೇಜಪ್ಪಾ!

ಇದು ಕಳ್ಳರ ಕಾಲೇಜು, ಇಲ್ಲಿ ಉತ್ತಮ ಪ್ರಜೆ ಹೇಗಾಗಬಹುದು ಎನ್ನುವ ಪಾಠ ಮಾಡುವುದಿಲ್ಲ, ಸಮಾಜದಲ್ಲಿ ಹೆಸರನ್ನು ಹೇಗೆ ಹಾಳು ಮಾಡಿಕೊಳ್ಳಬಹುದು ಎನ್ನುವ ಪಾಠ ನಡೆಯುತ್ತದೆ. ಕಳ್ಳರ ಕಾಲೇಜುಗಳು ಎಂದೇ ಇವು ಕುಖ್ಯಾತಿ ಪಡೆದಿವೆ. ಭೋಪಾಲ್ನಿಂದ 100 ಕಿ.ಮೀ ದೂರದಲ್ಲಿರುವ ರಾಜ್ಗಢ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ಚಿಕ್ಕವಯಸ್ಸಿನಿಂದಲೇ ಮಕ್ಕಳನ್ನು ವೃತ್ತಿಪರ ಕಳ್ಳರು ಹಾಗೂ ದರೋಡೆಕೋರನ್ನಾಗಿ ಮಾಡಲು ತರಬೇತಿ ನೀಡಲಾಗುತ್ತದೆ. ಭೋಪಾಲ್, ಡಿಸೆಂಬರ್ 11: ಕೆಟ್ಟ ವಿದ್ಯಾರ್ಥಿಗಳಿರಬಹುದು ಆದರೆ ಕೆಟ್ಟ ಶಿಕ್ಷಕರಿರುವುದು ತುಂಬಾ ಕಡಿಮೆ, ಮಕ್ಕಳು ಓದಬೇಕು, ಒಳ್ಳೆಯ ನೌಕರಿ ಪಡೆಯಬೇಕು, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು ಎನ್ನುವ ಆಸೆ ಎಲ್ಲಾ ಶಿಕ್ಷಕರಿಗಿರುತ್ತದೆ. ಆದರೆ ದುಡ್ಡು ಕೊಟ್ಟರೆ ಕಳ್ಳತನ(Theft) ದ ಪಾಠ ಮಾಡುವ ಕಾಲೇಜುಗಳ ಬಗ್ಗೆ ಎಂದಾದರೂ ಕೇಳಿದ್ದೀರಾ? ಇದು ಮಧ್ಯಪ್ರದೇಶದಲ್ಲಿದೆ. ಕಳ್ಳರ ಕಾಲೇಜುಗಳು ಎಂದೇ ಇವು ಕುಖ್ಯಾತಿ ಪಡೆದಿವೆ. ಭೋಪಾಲ್ನಿಂದ 100 ಕಿ.ಮೀ ದೂರದಲ್ಲಿರುವ ರಾಜ್ಗಢ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ಚಿಕ್ಕವಯಸ್ಸಿನಿಂದಲೇ ಮಕ್ಕಳನ್ನು ವೃತ್ತಿಪರ ಕಳ್ಳರು ಹಾಗೂ ದರೋಡೆಕೋರನ್ನಾಗಿ ಮಾಡಲು ತರಬೇತಿ ನೀಡಲಾಗುತ್ತದೆ. ಎನ್ಡಿಟಿವಿ ವರದಿ ಪ್ರಕಾರ ಕಡಿಯಾ, ಗುಲ್ಖೇಡಿ ಹಾಗೂ ಹುಲ್ಖೇಡಿ ಎಂಬ ಈ ಗ್ರಾಮಗಳು ಮಕ್ಕಳಿಗೆ ಕಳ್ಳತನ, ದರೋಡೆ ಹಾಗೂ ಡಕಾಯಿತಿ ಕಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳು ಅಪರಾಧ ಕೌಶಲ್ಯಗಳೊಂದಿಗೆ ಪದವಿ ಪಡೆಯಲು 3 ಲಕ್ಷ ರೂ. ಖಚರ್ಚ ಮಾಡಲು ಸಿದ್ಧರಿದ್ದಾರೆ ಎಂಬುದು ಇನ್ನೂ ಆತಂಕಕಾರಿ ವಿಷಯವಾಗಿದೆ. ಒಂದು ವರ್ಷದ ತರಬೇತಿ ಬಳಿಕ ಬಾಲಕನ ಪೋಷಕರು ಗ್ಯಾಂಗ್ ನಾಯಕನಿಂದ ವಾರ್ಷಿಕ 3 ರಿಂದ 5 ಲಕ್ಷ ರೂ.ಗಳವರೆಗೆ ಪಾವತಿ ಪಡೆಯುತ್ತಾರೆ. ಈ ಗ್ರಾಮಗಳ 2 ಸಾವಿರಕ್ಕೂ ಹೆಚ್ಚು ತರಬೇತಿ ಪಡೆದ ವ್ಯಕ್ತಿಗಳ ವಿರುದ್ಧ ದೇಶಾದ್ಯಂತ ಇರುವ ಪೊಲೀಸ್ ಠಾಣೆಗಳಲ್ಲಿ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮತ್ತಷ್ಟು ಓದಿ: ಕಳ್ಳತನ, ದರೋಡೆಯಲ್ಲಿ ಖಾಕಿ ಶಾಮೀಲು: ವಿಚಾರಣೆಗೆ ಬಂದಿದ್ದ ಆರೋಪಿಯಿಂದಲೇ ಹಣ ಎಗರಿಸಿದ ಹೆಡ್ ಕಾನ್ಸ್ಟೇಬಲ್ 12 ಅಥವಾ 13 ವರ್ಷದ ಮಕ್ಕಳನ್ನು ಅವರ ಪೋಷಕರು ಈ ಹಳ್ಳಿಗಳಿಗೆ ಅಪರಾಧ ಚಟುವಟಿಕೆಗಳಲ್ಲಿ ತರಬೇತಿ ನೀಡಲು ಕಳುಹಿಸುತ್ತಾರೆ. ಈ ಕಠಿಣ ಪಠ್ಯಕ್ರಮದಲ್ಲಿ ಸೇರಲು ಕುಟುಂಬಗಳು 2 ರಿಂದ 3 ಲಕ್ಷ ರೂ.ವರೆಗೆ ಶುಲ್ಕವನ್ನು ಪಾವತಿಸುತ್ತಾರಂತೆ. ಪೊಲೀಸರು ಎಲ್ಲಾ ಅಧಿಕಾರವನ್ನು ಹೊಂದಿದ್ದರೂ ಸಹ, ಈ ಪ್ರದೇಶದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾರೆ. ಮಕ್ಕಳಿಗೆ ಜೇಬುಗಳ್ಳತನ, ಜನದಟ್ಟಣೆಯ ಸ್ಥಳಗಳಲ್ಲಿ ಚೀಲಗಳನ್ನು ಕಸಿದುಕೊಳ್ಳುವುದು, ವೇಗವಾಗಿ ಓಡುವುದು, ಪೊಲೀಸರಿಂದ ತಪ್ಪಿಸಿಕೊಳ್ಳುವುದು ಮತ್ತು ಸಿಕ್ಕಿಬಿದ್ದರೆ ಹೊಡೆತಗಳನ್ನು ಸಹಿಸಿಕೊಳ್ಳುವುದು ಮುಂತಾದ ವಿವಿಧ ಅಪರಾಧ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಗ್ಯಾಂಗ್‌ನಲ್ಲಿ ಒಂದು ವರ್ಷ ಪೂರ್ಣಗೊಳಿಸಿದ ನಂತರ, ಮಗುವಿನ ಪೋಷಕರು ಗ್ಯಾಂಗ್ ನಾಯಕನಿಂದ ವಾರ್ಷಿಕ 3 ರಿಂದ 5 ಲಕ್ಷ ರೂ.ಗಳವರೆಗೆ ಪಾವತಿಯನ್ನು ಪಡೆಯುತ್ತಾರೆ. ಕಳೆದ ವರ್ಷ ಆಗಸ್ಟ್ 8 ರಂದು ಜೈಪುರದ ಹಯಾತ್ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಡೆಸ್ಟಿನೇಶನ್ ವೆಡ್ಡಿಂಗ್ನಲ್ಲಿ , ಒಬ್ಬ ಅಪ್ರಾಪ್ತ ಕಳ್ಳ 1.5 ಕೋಟಿ ರೂ. ಮೌಲ್ಯದ ಆಭರಣ ಮತ್ತು 1 ಲಕ್ಷ ರೂ. ನಗದು ಇದ್ದ ಬ್ಯಾಗನ್ನು ದೋಚಿಕೊಂಡು ಪರಾರಿಯಾಗಿದ್ದ. ಸಮಾರಂಭ ನಡೆದು ವಧು-ವರರನ್ನು ಆಶೀರ್ವದಿಸುತ್ತಿದ್ದಾಗ, ವರನ ತಾಯಿ ತನ್ನ ಬಿಳಿ ಚೀಲವನ್ನು ಪಕ್ಕದಲ್ಲಿ ಇಟ್ಟಿದ್ದರು. ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕಳ್ಳನು ಚೀಲವನ್ನು ಕದ್ದು, ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದ. ಕೊನೆಗೆ, ಕಳ್ಳತನದಲ್ಲಿ ಭಾಗಿಯಾಗಿದ್ದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿತ್ತು, ಇದರಿಂದಾಗಿ ಇಡೀ ಗ್ಯಾಂಗ್ನ ಸತ್ಯ ಬಹಿರಂಗಗೊಂಡಿತ್ತು. ಡಿಸೆಂಬರ್ 2023 ರಲ್ಲಿ, 22 ವರ್ಷದ ಯಶ್ ಸಿಸೋಡಿಯಾ ದೆಹಲಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಆಭರಣಗಳಿಂದ ತುಂಬಿದ ಚೀಲವನ್ನು ಕದ್ದು ಪರಾರಿಯಾಗಿದ್ದನು. ಹಳ್ಳಿಯೊಳಗೆ ಪರಿಚಯವಿಲ್ಲದ ಯಾವೊಬ್ಬ ವ್ಯಕ್ತಿ ಪ್ರವೇಶಿಸಿದರೂ, ನಿವಾಸಿಗಳು ತಕ್ಷಣವೇ ಎಚ್ಚರಗೊಳ್ಳುತ್ತಾರಂತೆ. ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪಕ್ಷದೊಳಗೆ ಎಸ್‌ಐಆರ್ ನಡೆಸಿದಾಗ ಮಾತ್ರ ಕಾಂಗ್ರೆಸ್ ಉಳಿಯುತ್ತೆ: ಪ್ರಲ್ಹಾದ್ ಜೋಶಿ

ಕಾಂಗ್ರೆಸ್ ಪಕ್ಷದಲ್ಲೇ ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಅಗತ್ಯತೆ ಹೆಚ್ಚಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಸಂಸತ್ ಚಳಿಗಾಲದ ಅಧಿವೇಶನದ ಈ ಸಂದರ್ಭದಲ್ಲಿ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣಾ ಆಯೋಗಕ್ಕಿಂತ ಕಾಂಗ್ರೆಸ್ ಪಕ್ಷದಲ್ಲೇ ಎಸ್ಐಆರ್ನ ತುಂಬಾ ಅವಶ್ಯಕತೆ ಇದೆ ಎಂದು ಹೇಳಿದರು. ನವದೆಹಲಿ, ಡಿಸೆಂಬರ್ 11: ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ನಡೆಯುತ್ತಿದೆ. ವಿರೋಧ ಪಕ್ಷಗಳು ಎಸ್‌ಐಆರ್ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿವೆ. ದೇಶದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳನ್ನು ನುಸುಳುಕೋರರು ಆಯ್ಕೆ ಮಾಡುವುದಿಲ್ಲ, ಆದ್ದರಿಂದ ಎಸ್‌ಐಆರ್ ಅಗತ್ಯ ಎಂದು ಆಡಳಿತ ಪಕ್ಷ ವಾದಿಸುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ವಿಶೇಷ ತೀವ್ರ ಪರಿಷ್ಕರಣೆಯ ಅಗತ್ಯವಿದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹೀಗೆ ಬರೀ ನಕಲಿ ಗಾಂಧಿಗಳದ್ದೇ ಅಧಿಕಾರ ಮುಂಚೂಣಿಯಲ್ಲಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದೊಳಗೇ ಮೊದಲು ಎಸ್‌ಐಆರ್ ನಡೆಯಬೇಕಿದೆ ಎಂದು ಜೋಶಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದೊಳಗೆ ವಿಶೇಷ ತೀವ್ರ ಪರಿಷ್ಕರಣೆಯ ಅವಶ್ಯಕತೆಯಿದೆ. ಇದು ಸಂಭವಿಸಿದರೆ ಮಾತ್ರ ಕಾಂಗ್ರೆಸ್ ಪಕ್ಷ ಉಳಿಯುತ್ತದೆ, ಇಲ್ಲದಿದ್ದರೆ, ಅದು ನಾಶವಾಗುತ್ತದೆ ಎಂದು ಅವರು ಹೇಳಿದರು. ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ಟೀಕಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹೇಳಿಕೆ ಬಂದಿದೆ. ಮತ್ತಷ್ಟು ಓದಿ: ಇಂಡಿಗೋ ಈ ಸ್ಥಿತಿಗೆ ಬರಲು ಕಾರಣ ಯಾರು? ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಿಷ್ಟು ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವರು, ರಾಹುಲ್ ಗಾಂಧಿಯವರ ಇತ್ತೀಚಿನ ಮೂರು ಪತ್ರಿಕಾಗೋಷ್ಠಿಗಳನ್ನು ಉಲ್ಲೇಖಿಸಿ, ಚುನಾವಣಾ ಆಯೋಗದ ವಿರುದ್ಧ ಅವರು ಮಾಡಿರುವ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದರು. ರಾಹುಲ್ ಗಾಂಧಿಯವರ ಹೇಳಿಕೆ ಮತ್ತು ಅಮಿತ್ ಶಾರ ವ್ಯಂಗ್ಯ ಹರಿಯಾಣದ ಒಂದೇ ಮನೆಯಲ್ಲಿ ಜಾಸ್ತಿಸಂಖ್ಯೆಯಲ್ಲಿ ವೋಟರ್ಸ್ ಇದ್ದಾರೆ ಅನ್ನೋ ರಾಹುಲ್ ಆರೋಪಕ್ಕೆ ಅಮಿತ್ ಶಾ ತಿರುಗೇಟು ಕೊಟ್ಟರು. ಈ ವೇಳೆ, ಆಕ್ಷೇಪಿಸಿದ ರಾಹುಲ್ ಗಾಂಧಿ, ನಾನು ನಡೆಸಿರುವ 3 ಸುದ್ದಿಗೋಷ್ಠಿಗಳ ಡೇಟಾ ಬಗ್ಗೆ ಓಪನ್ ಡಿಬೇಟ್ ಮಾಡೋಣ ಅಂತ ಸವಾಲ ಹಾಕಿದ್ದಾರೆ. ಇದಕ್ಕೆ ನಿಮ್ಮ ಇಷ್ಟದಂತೆ ಸಂಸತ್ತು ನಡೆಯಲ್ಲ ಅಂತ ಅಮಿತ್ ಶಾ ಕೌಂಟರ್ ಕೊಟ್ಟಿದ್ದಾರೆ. ಬಿಜೆಪಿ ಮತ್ತು ಎನ್‌ಡಿಎ ಚರ್ಚೆಯಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ. ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ. ನ್ಯಾಯಯುತ ಚುನಾವಣೆಗಳನ್ನ ನಡೆಸುವ ಜವಾಬ್ದಾರಿಯನ್ನು ಚುನಾವಣಾ ಆಯೋಗ ಹೊಂದಿದೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ತಿದ್ದುಪಡಿ ಮಾಡುವ ಜವಾಬ್ದಾರಿಯನ್ನು ಚುನಾವಣಾ ಆಯೋಗವೂ ಹೊಂದಿದೆ ಎಂದು ಅಮಿತ್ ಶಾ ಹೇಳಿದರು. 325ನೇ ವಿಧಿಯು ಯಾವುದೇ ಅರ್ಹ ಮತದಾರರನ್ನ ಪಟ್ಟಿಯಿಂದ ಹೊರಗಿಡುವುದನ್ನ ನಿಷೇಧಿಸುತ್ತದೆ. ಮತದಾರರ ಮಾನದಂಡಗಳು 326ನೇ ವಿಧಿಯಲ್ಲಿವೆ. ಮೊದಲ ಅವಶ್ಯಕತೆಯೆಂದರೆ ಮತದಾರನು ಭಾರತೀಯ ಪ್ರಜೆಯಾಗಿರಬೇಕು. 2ನೇಯದು ಅವರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಚುನಾವಣಾ ಆಯೋಗವು ಈ ಎಲ್ಲಾ ಅರ್ಹತಾ ಮಾನದಂಡಗಳನ್ನ ಪರಿಶೀಲಿಸುವ ಮತ್ತು ಶಾಸನ ಶಿಫಾರಸು ಮಾಡುವ ಅಧಿಕಾರ ನೀಡಲಾಗಿದೆ. 1952ರಲ್ಲಿ ಮೊದಲ ಬಾರಿಗೆ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ನಡೆಯಿತು ಮೊದಲ ಎಸ್‌ಐಆರ್ 1952 ರಲ್ಲಿ ನಡೆಯಿತು. ಆ ಸಮಯದಲ್ಲಿ, ಜವಾಹರಲಾಲ್ ನೆಹರು ಕಾಂಗ್ರೆಸ್ ಪಕ್ಷದ ಪ್ರಧಾನಿಯಾಗಿದ್ದರು. ಅಂದಿನಿಂದ ಹಲವಾರು ಬಾರಿ ಎಸ್ಐಆರ್ಗಳನ್ನು ನಡೆಸಲಾಗಿದೆ. 2004 ರ ನಂತರ, ಈಗ 2025 ರಲ್ಲಿ ಎಸ್‌ಐಆರ್ ನಡೆಸಲಾಗುತ್ತಿದೆ ಮತ್ತು ಪ್ರಸ್ತುತ ಎನ್‌ಡಿಎ ಸರ್ಕಾರವಿದೆ. 2004 ರವರೆಗೆ, ಯಾವುದೇ ಪಕ್ಷವು ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸಲಿಲ್ಲ ಏಕೆಂದರೆ ಅದು ಚುನಾವಣೆಯ ಪಾವಿತ್ರ್ಯವನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಹೊಂದಿತ್ತು ಎಂದು ಅಮಿತ್ ಶಾ ಹೇಳಿದರು. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳಿಗೆ ಆಧಾರವಾಗಿರುವ ಮತದಾರರ ಪಟ್ಟಿಯು ದೋಷಪೂರಿತವಾಗಿದ್ದರೆ, ಚುನಾವಣೆ ಹೇಗೆ ನ್ಯಾಯಯುತವಾಗಿರುತ್ತದೆ ಎಂದು ಅವರು ಹೇಳಿದರು. ಮತದಾರರ ಪಟ್ಟಿಯ ನಿಯತಕಾಲಿಕವಾಗಿ ಸಂಪೂರ್ಣ ಪರಿಷ್ಕರಣೆ ಅತ್ಯಗತ್ಯ. ಆದ್ದರಿಂದ, ಚುನಾವಣಾ ಆಯೋಗವು 2025 ರಲ್ಲಿ ಎಸ್‌ಐಆರ್ ನಡೆಸಲು ನಿರ್ಧರಿಸಿತು. ಒಬ್ಬ ಮತದಾರರು ಒಂದಕ್ಕಿಂತ ಹೆಚ್ಚು ಮತದಾರರ ಚೀಟಿಯನ್ನು ಹೊಂದಿರಬಾರದು. ಮೃತ ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬಾರದು. ಈಗ ಮತದಾರರ ಪಟ್ಟಿಯ ಶುದ್ಧೀಕರಣ ನಡೆದಿದೆ ಎಂದರು. ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
88 Minutes In PMO: ಪ್ರಧಾನಿ ನರೇಂದ್ರ ಮೋದಿ, ರಾಹುಲ್ ನಡುವೆ ಏನೆಲ್ಲಾ ಚರ್ಚೆ ನಡೀತು, ಇನ್ಸೈಡ್ ಮಾಹಿತಿ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಮುಂದಿನ ಮುಖ್ಯ ಮಾಹಿತಿ ಆಯುಕ್ತರ (ಸಿಐಸಿ) ನೇಮಕ, ಇತರ ಮಾಹಿತಿ ಆಯುಕ್ತರು ಮತ್ತು ವಿಜಿಲೆನ್ಸ್ ಆಯುಕ್ತರ ನೇಮಕದ ಮೇಲೆ ಸಭೆ ಕೇಂದ್ರೀಕೃತವಾಗಿತ್ತು. ಗೃಹ ಸಚಿವರನ್ನು ಒಳಗೊಂಡ ಈ ಹುದ್ದೆಗಳಿಗೆ ನೇಮಕಾತಿ ಸಮಿತಿಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿದ್ದರು. ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಇದ್ದರು. ನವದೆಹಲಿ, ಡಿಸೆಂಬರ್ 11: ಸದಾ ಒಂದಲ್ಲಾ ಒಂದು ವಿಚಾರವಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ(Narendra Modi)ಯನ್ನು ಟೀಕಿಸುತ್ತಲೇ ಇರುತ್ತಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರಧಾನಿ ಬಳಿ ಶಾಂತಿಯಿಂದ ಕುಳಿತು ಮಾತನಾಡಿದ್ದಾರೆ. ಸಂಸತ್ತಿನಲ್ಲಿಎಸ್ಐಆರ್ ಬಗ್ಗೆ ಗದ್ದಲ ಎಬ್ಬಿಸಿ ಮುಖ್ಯ ಮಾಹಿತಿ ಆಯುಕ್ತರ ಅಭ್ಯರ್ಥಿಗಳ ಕುರಿತು ಚರ್ಚಿಸಲು ಮೋದಿಯವರನ್ನು ಭೇಟಿಯಾಗಿದ್ದರು. ಪ್ರಧಾನಿ ಮೋದಿ ಕಚೇರಿಯಲ್ಲಿ 88 ನಿಮಿಷಗಳ ಕಾಲ ಇವರಿಬ್ಬರ ನಡುವೆ ಮಾತುಕತೆ ನಡೆಯಿತು. ರಾಹುಲ್ ಗಾಂಧಿ ಹೊರಬಂದಾಗ, ಚರ್ಚೆಯು ಮುಖ್ಯ ಮಾಹಿತಿ ಆಯುಕ್ತರ ನೇಮಕಾತಿಯ ಬಗ್ಗೆ ಮಾತ್ರವಲ್ಲ, ಎಂಟು ಮಾಹಿತಿ ಆಯುಕ್ತರು ಮತ್ತು ಒಬ್ಬ ವಿಜಿಲೆನ್ಸ್ ಆಯುಕ್ತರ ನೇಮಕಾತಿಗಳ ಬಗ್ಗೆಯೂ ಆಗಿತ್ತು ಎಂದು ತಿಳಿದುಬಂದಿದೆ. ಇಂತಹ ಸಭೆಗಳಿಗೆ ಹಾಜರಾಗುವ ವಿರೋಧ ಪಕ್ಷದ ನಾಯಕರ ಆಕ್ಷೇಪಗಳನ್ನು ಸಾಮಾನ್ಯವಾಗಿ ಊಹಿಸಬಹುದಾದವು. ಈ ಬಾರಿಯೂ ಫಲಿತಾಂಶ ಭಿನ್ನವಾಗಿರದಿದ್ದರೂ, 88 ನಿಮಿಷಗಳ ಸಭೆಯು ಸಂಸತ್ತಿನ ಕಾರಿಡಾರ್‌ಗಳಲ್ಲಿ ಬಿಸಿ ಚರ್ಚೆಗೆ ಕಾರಣವಾಯಿತು. ಕೇಂದ್ರ ಮಾಹಿತಿ ಆಯೋಗದಲ್ಲಿ 8 ಹುದ್ದೆಗಳು ಖಾಲಿ ಇವೆ ಪ್ರಸ್ತುತ, ಕೇಂದ್ರ ಮಾಹಿತಿ ಆಯೋಗದಲ್ಲಿ (CIC) ಮುಖ್ಯ ಮಾಹಿತಿ ಆಯುಕ್ತರ ಹುದ್ದೆ ಸೇರಿದಂತೆ ಎಂಟು ಹುದ್ದೆಗಳು ಖಾಲಿ ಇವೆ. ಈ ಅಧಿಕಾರಿಯು RTI ಅರ್ಜಿದಾರರ ದೂರುಗಳು ಮತ್ತು ಮೇಲ್ಮನವಿಗಳನ್ನು ನೋಡಿಕೊಳ್ಳುತ್ತಾರೆ. ಹಿರಾಲಾಲ್ ಸಮಾರಿಯಾ ಅವರು ಸೆಪ್ಟೆಂಬರ್ 13 ರವರೆಗೆ ಭಾರತದ ಮುಖ್ಯ ಮಾಹಿತಿ ಆಯುಕ್ತರಾಗಿದ್ದರು. ಅವರ ನಿವೃತ್ತಿಯ ನಂತರ, ಈ ಹುದ್ದೆ ಖಾಲಿಯಾಗಿದೆ. 30,838 ಸಿಐಸಿ ಪ್ರಕರಣಗಳು ಇನ್ನೂ ಬಾಕಿ ಇವೆ ಸಿಐಸಿಯ ವೆಬ್‌ಸೈಟ್ ಪ್ರಕಾರ, ಇದು 30,838 ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 12(3) ರ ಅಡಿಯಲ್ಲಿ, ಪ್ರಧಾನಿ ಆಯ್ಕೆ ಸಮಿತಿಯ ಅಧ್ಯಕ್ಷತೆಯನ್ನು ವಹಿಸುತ್ತಾರೆ, ಇದರಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಪ್ರಧಾನಿ ನಾಮನಿರ್ದೇಶನ ಮಾಡಿದ ಕೇಂದ್ರ ಸಚಿವರು ಸಹ ಇರುತ್ತಾರೆ. ಅವರು ಒಟ್ಟಾಗಿ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕಾತಿಗೆ ಹೆಸರುಗಳನ್ನು ಆಯ್ಕೆ ಮಾಡಿ ಶಿಫಾರಸು ಮಾಡುತ್ತಾರೆ. ಈ ಸಭೆಯಲ್ಲಿ ರಾಹುಲ್ ಗಾಂಧಿ ಶಾರ್ಟ್‌ಲಿಸ್ಟ್ ಮಾಡಿದ ಹೆಸರುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ, ಅತ್ಯಂತ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭ್ಯರ್ಥಿಗಳು ಇಲ್ಲದಿರುವ ಬಗ್ಗೆ ರಾಹುಲ್ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಲವಾರು ವಾರಗಳ ಹಿಂದೆ, ಅರ್ಜಿದಾರರ ಜಾತಿ ಸಂಯೋಜನೆಯ ಬಗ್ಗೆ ರಾಹುಲ್ ಸರ್ಕಾರದಿಂದ ಮಾಹಿತಿಯನ್ನು ಕೋರಿದ್ದರು. ಬುಧವಾರ ಸ್ವೀಕರಿಸಿದ ಮಾಹಿತಿಯ ಪ್ರಕಾರ, ಒಟ್ಟು ಅರ್ಜಿದಾರರಲ್ಲಿ ಕೇವಲ 50% ಮತ್ತು ಶಾರ್ಟ್‌ಲಿಸ್ಟ್‌ನಲ್ಲಿ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಹಿಂದುಳಿದ ವರ್ಗಗಳಿಂದ ಬಂದವರು. ಇದು ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಹೊರಗಿಡುವ ಕ್ರಮವಾಗಿದೆ ಎಂದು ಅವರು ಹೇಳದ್ದಾರೆ. ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ