ಮದುವೆ ಮಾತುಕತೆಗೆಂದು ಮನೆಗೆ ಕರೆದು ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಸೈಲೆಂಟಾಗಿ ಸ್ಮಶಾನಕ್ಕೆ ಕಳುಹಿಸಿದ ಯುವತಿಯ ಪೋಷಕರು

ಮಗಳನ್ನು ಪ್ರೀತಿಸಿದ್ದಕ್ಕೆ ಕೋಪಗೊಂಡ ಪೋಷಕರು ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಹೊಡೆದು ಕೊಂದಿರುವ ಘಟನೆ ತೆಲಂಗಾಣದ ಸಂಗರೆಡ್ಡಿಯಲ್ಲಿ ನಡೆದಿದೆ. ಮದುವೆ ಮಾತುಕತೆಗೆಂದು ಮನೆಗೆ ಕರೆದು ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬ್ಯಾಟ್‌ನಿಂದ ಥಳಿಸಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ವಿದ್ಯಾರ್ಥಿಯ ಸಾವಿಗೆ ಕಾರಣವಾದ ಹಿಂಸಾತ್ಮಕ ದಾಳಿಗೂ ಮುನ್ನ ಯುವತಿಯ ಕುಟುಂಬ ಹಲವಾರು ಬಾರಿ ಎಚ್ಚರಿಕೆ ನೀಡಿತ್ತು, ಈ ಸಂಬಂಧಕ್ಕೆ ಅವರ ವಿರೋಧವಿತ್ತು. ಸಂಗರೆಡ್ಡಿ, ಡಿಸೆಂಬರ್ 11: ಮಗಳನ್ನು ಪ್ರೀತಿಸಿದ್ದಕ್ಕೆ ಕೋಪಗೊಂಡ ಪೋಷಕರು ಎಂಜಿನಿಯರಿಂಗ್ ವಿದ್ಯಾರ್ಥಿ(Student)ಯನ್ನು ಹೊಡೆದು ಕೊಂದಿರುವ ಘಟನೆ ತೆಲಂಗಾಣದ ಸಂಗರೆಡ್ಡಿಯಲ್ಲಿ ನಡೆದಿದೆ. ಮದುವೆ ಮಾತುಕತೆಗೆಂದು ಮನೆಗೆ ಕರೆದು ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬ್ಯಾಟ್‌ನಿಂದ ಥಳಿಸಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ವಿದ್ಯಾರ್ಥಿಯ ಸಾವಿಗೆ ಕಾರಣವಾದ ಹಿಂಸಾತ್ಮಕ ದಾಳಿಗೂ ಮುನ್ನ ಯುವತಿಯ ಕುಟುಂಬ ಹಲವಾರು ಬಾರಿ ಎಚ್ಚರಿಕೆ ನೀಡಿತ್ತು, ಈ ಸಂಬಂಧಕ್ಕೆ ಅವರ ವಿರೋಧವಿತ್ತು. ಮೃತ ವಿದ್ಯಾರ್ಥಿ ಹೆಸರು ಜ್ಯೋತಿ ಶ್ರವಣ್ ಸಾಯಿ ಆತ ಮೈಸಮ್ಮಗುಡದ ಸೇಂಟ್ ಪೀಟರ್ಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಓದುತ್ತಿದ್ದ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ. ಆತ ಕುತುಬುಲ್ಲಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಅಮೀನ್‌ಪುರ ಸರ್ಕಲ್ ಇನ್ಸ್‌ಪೆಕ್ಟರ್ ನರೇಶ್ ನೀಡಿರುವ ಮಾಹಿತಿಯ ಪ್ರಕಾರ, ಶ್ರವಣ್ ಬೀರಮ್‌ಗುಡದ ಇಸುಕಬಾವಿ ನಿವಾಸಿ 19 ವರ್ಷದ ಶ್ರೀಜಾ ಜೊತೆ ಸಂಬಂಧ ಹೊಂದಿದ್ದ. ಅವರ ಸಂಬಂಧಕ್ಕೆ ಶ್ರೀಜಾ ಅವರ ಕುಟುಂಬದಿಂದ ವಿರೋಧವಿತ್ತು. ಈ ಹಿಂದೆ ಅವರು ಹುಡುಗನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಘಟನೆ ನಡೆದ ದಿನ, ಶ್ರೀಜಾಳ ಪೋಷಕರು ಶ್ರವಣ್ನನ್ನು ಮದುವೆಯ ಬಗ್ಗೆ ಚರ್ಚಿಸಬೇಕು ಬಾ ಎಂದು ಮನೆಗೆ ಕರೆಸಿಕೊಂಡಿದ್ದರು. ಆತ ಬರುತ್ತಿದ್ದಂತೆ ಕುಟುಂಬ ಸದಸ್ಯರು, ಶ್ರೀಜಾಳ ತಾಯಿ ಸೇರಿ, ಶ್ರವಣ್ ಮೇಲೆ ಹಠಾತ್ತನೆ ಹಲ್ಲೆ ನಡೆಸಿ ಕ್ರಿಕೆಟ್ ಬ್ಯಾಟ್‌ನಿಂದ ತೀವ್ರವಾಗಿ ಹೊಡೆದಿದ್ದಾರೆ. ಆತನ ತಲೆಗೆ ಗಾಯಗಳಾಗಿದ್ದು, ಕಾಲು ಮತ್ತು ಪಕ್ಕೆಲುಬುಗಳಿಗೆ ಮುರಿತಗಳಾಗಿತ್ತು. ನಂತರ ಅವನನ್ನು ಕುಕತ್ಪಲ್ಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದ. ಮತ್ತಷ್ಟು ಓದಿ: ಕೊಪ್ಪಳ ಯಲ್ಲಾಲಿಂಗ ಕೊಲೆ ಕೇಸ್: ಸಚಿವ ಶಿವರಾಜ ತಂಗಡಗಿ ಆಪ್ತ ಸೇರಿ 9 ಆರೋಪಿಗಳು ಖುಲಾಸೆ ಅಮೀನ್‌ಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖಾಧಿಕಾರಿಗಳು ಅಪರಾಧಕ್ಕೆ ಬಳಸಲಾದ ಕ್ರಿಕೆಟ್ ಬ್ಯಾಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಅವರು ದೃಶ್ಯವನ್ನು ಸಹ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಪ್ರಸ್ತುತ ದಾಳಿಯ ಹಿಂದಿನ ನಿಖರವಾದ ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಕುಟುಂಬದಲ್ಲಿ ಬೇರೆ ಯಾರಾದರೂ ಸದಸ್ಯರು ಭಾಗಿಯಾಗಿದ್ದಾರೆಯೇ ಎಂದು ಪತ್ತೆ ಹಚ್ಚುತ್ತಿದ್ದಾರೆ. ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪಾಕಿಸ್ತಾನದಲ್ಲಿ ನ್ಯಾಯಾಧೀಶರ ರೂಂನಿಂದ ಸೇಬು ಹಣ್ಣು, ಹ್ಯಾಂಡ್ವಾಶ್ ಕಳ್ಳತನ; ಕೇಸ್ ದಾಖಲು

ಪಾಕಿಸ್ತಾನದ ಲಾಹೋರ್‌ನಲ್ಲಿ ಸೆಷನ್ಸ್ ನ್ಯಾಯಾಧೀಶರ ಕೊಠಡಿಯಿಂದ ಎರಡು ಸೇಬು ಮತ್ತು ಹ್ಯಾಂಡ್ ವಾಶ್ ಕಳ್ಳತನ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಡಿಸೆಂಬರ್ 5ರಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನೂರ್ ಮುಹಮ್ಮದ್ ಬಸ್ಮಲ್ ಅವರ ಕೊಠಡಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನವದೆಹಲಿ, ಡಿಸೆಂಬರ್ 10: ಪಾಕಿಸ್ತಾನದ ಲಾಹೋರ್‌ನಲ್ಲಿ ಸೆಷನ್ ಕೋರ್ಟ್ ನ್ಯಾಯಮೂರ್ತಿಯವರ ಕೊಠಡಿಯಿಂದ 2 ಸೇಬು ಹಣ್ಣುಗಳು ಮತ್ತು ಹ್ಯಾಂಡ್ ವಾಶ್ ಕಳ್ಳತನವಾಗಿದೆ. ಇದಾದ ನಂತರ ಕೇಸ್ ದಾಖಲಿಸಲಾಗಿದೆ. ಡಿಸೆಂಬರ್ 5ರಂದು ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿ ನೂರ್ ಮುಹಮ್ಮದ್ ಬಸ್ಮಲ್ ಅವರ ಕೊಠಡಿಯಲ್ಲಿ ಈ ಘಟನೆ ಸಂಭವಿಸಿದೆ. ಇಸ್ಲಾಂಪುರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾದ ಎಫ್ಐಆರ್ನಲ್ಲಿ ಕದ್ದ ವಸ್ತುಗಳ ಮೌಲ್ಯ PKR 1,000 ಆಗಿದೆ ಎಂದು ಸೂಚಿಸಲಾಗಿದೆ. ನ್ಯಾಯಾಧೀಶರ ಸೂಚನೆಯಡಿಯಲ್ಲಿ ದೂರು ದಾಖಲಿಸಲಾಗಿದೆ. ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 380ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ತಪ್ಪಿತಸ್ಥರೆಂದು ಸಾಬೀತಾದರೆ, ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು. ಇದನ್ನೂ ಓದಿ: Video: ಪಾಕ್ ಮಹಿಳಾ ರಿಪೋರ್ಟರ್ಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ವಕ್ತಾರ ಈ ವಿಚಿತ್ರ ಎಫ್‌ಐಆರ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದು, ಈ ಘಟನೆ ವೈರಲ್ ಆಗಿದೆ. ಕೆಲವರು ಈ ಘಟನೆಯನ್ನು ಅಪಹಾಸ್ಯ ಮಾಡಿ ಎಫ್‌ಐಆರ್ ಅನ್ನು ಪ್ರಶ್ನಿಸಿದ್ದಾರೆ. ಕದ್ದ ವಸ್ತುಗಳನ್ನು ಮರುಪಡೆಯಲು ಜಂಟಿ ತನಿಖಾ ತಂಡ (ಜೆಐಟಿ) ರಚಿಸಬೇಕು ಎಂದು ಕೆಲವು ನೆಟ್ಟಿಗರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಸಾರ್ವಜನಿಕರಿಗೆ ಭಾರೀ ನಷ್ಟವನ್ನುಂಟುಮಾಡುವ ಹೈ ಪ್ರೊಫೈಲ್ ಪ್ರಕರಣಗಳಲ್ಲಿನ ವಿಳಂಬವನ್ನು ಎತ್ತಿ ತೋರಿಸಿದ್ದಾರೆ. ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Astrology prediction: ಮುಂದಿನ 30 ವರ್ಷಗಳಲ್ಲಿ ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯಲಿದೆ ಭಾರತ; ಜ್ಯೋತಿಷಿ ಶರ್ಮಿಷ್ಠಾ ಭವಿಷ್ಯ ನುಡಿ

ಮುಂದಿನ 30 ವರ್ಷಗಳಲ್ಲಿ ಭಾರತವು ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯಲಿದೆ ಎಂದು ಖ್ಯಾತ ಜ್ಯೋತಿಷ್ಯ ವಿದ್ವಾಂಸೆ ಹಾಗೂ ಆಧ್ಯಾತ್ಮಿಕ ವಿಶ್ಲೇಷಕಿಯಾದ ಶರ್ಮಿಷ್ಠಾ ಅವರು ಭವಿಷ್ಯ ನುಡಿದಿದ್ದಾರೆ. ಚೀನಾ, ಅಮೆರಿಕಾದ ಬಳಿಕ ಇನ್ನು ಮುಂದಿನ ಮೂವತ್ತು ವರ್ಷಗಳಲ್ಲಿ ಭಾರತವು ವಿಶ್ವದ ಆರ್ಥಿಕ, ರಾಜಕೀಯ, ಅಥವಾ ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮುವ ರಾಷ್ಟ್ರವಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆ ಶರ್ಮಿಷ್ಠಾ ಅವರು ಬರೆದುಕೊಂಡಿದ್ದು, ಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ. ಜ್ಯೋತಿಷಿ ಶರ್ಮಿಷ್ಠಾ ಅವರ ಹೇಳುವಂತೆ, ಪ್ರತಿ 30 ವರ್ಷಗಳಿಗೊಮ್ಮೆ ಶನಿ ಗ್ರಹವು ಮೀನ ರಾಶಿಯಿಂದ ಮೇಷ ರಾಶಿಗೆ ಸಾಗುವ ಸಂದರ್ಭದಲ್ಲಿ, ಜಗತ್ತಿನ ಶಕ್ತಿಕೇಂದ್ರದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ. ಕೊನೆಯ ಬಾರಿ 1994–96ರಲ್ಲಿ ಶನಿ ಮೀನ ರಾಶಿಯಲ್ಲಿ ಇದ್ದಾಗ, ತೆರಿಗೆ ಸುಧಾರಣೆ ಹಾಗೂ ಕರೆನ್ಸಿ ಸುಧಾರಣೆಯ ಮೂಲಕ ಚೀನಾವು ವಿಶ್ವದ ಉತ್ಪಾದನಾ ಕೇಂದ್ರವಾಗಿ ಬೆಳೆಯಲು ಆರಂಭಿಸಿತು. ಅದಕ್ಕೂ ಮೊದಲು 1964–67ರಲ್ಲಿ ಶನಿ ಮೀನ ರಾಶಿಯಲ್ಲಿ ಇದ್ದಾಗ, ಅಮೇರಿಕಾ ಸಂಯುಕ್ತ ಸಂಸ್ಥಾನವು (USA) ವಿಶ್ವದ ಉತ್ಪಾದನಾ ಹಾಗೂ ಆರ್ಥಿಕ ಶಕ್ತಿಕೇಂದ್ರವಾಗಿತ್ತು. ಇದೀಗ 2025–27ರಲ್ಲಿ ಶನಿ ಮೀನ ರಾಶಿಯಲ್ಲಿ ಸಾಗುತ್ತಿರುವುದರಿಂದ, ಈ ಶಕ್ತಿ ಚೀನಾದಿಂದ ಭಾರತಕ್ಕೆ ವರ್ಗಾವಣೆಯಾಗಲಿದೆ. ಈ ಮೂಲಕ ಮುಂದಿನ 30 ವರ್ಷಗಳಲ್ಲಿ ಭಾರತ ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 1994–96ರಲ್ಲಿ ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆದಿದ್ದ ಚೀನಾ: 1994–96ರ ಅವಧಿ ಚೀನಾದ ಇತಿಹಾಸದಲ್ಲಿ ನಿರ್ಣಾಯಕ ತಿರುವು. ಈ ಮೂರು ವರ್ಷಗಳಲ್ಲಿ ತೆಗೆದುಕೊಂಡ ಆರ್ಥಿಕ–ನೀತಿಗತ ನಿರ್ಧಾರಗಳೇ ಚೀನಾವನ್ನು ಮುಂದಿನ ಎರಡು ದಶಕಗಳಲ್ಲಿ ವಿಶ್ವದ ಉತ್ಪಾದನಾ ಮಹಾಶಕ್ತಿಯಾಗುವಂತೆ ಮಾಡಿತು. ಈ ಅವಧಿಯನ್ನು ಜ್ಯೋತಿಷ್ಯ ಶನಿ ಮೀನ ರಾಶಿಯಲ್ಲಿ ಸಂಚರಿಸಿದ ಕಾಲ ಎಂದು ಗುರುತಿಸುತ್ತಾರೆ. ಜ್ಯೋತಿಷ್ಯ ವಿಶ್ಲೇಷಣೆಯಲ್ಲಿ ಇದನ್ನು ಜಾಗತಿಕ ಶಕ್ತಿ ವರ್ಗಾವಣೆಯ ಸಂಕೇತವೆಂದು ವ್ಯಾಖ್ಯಾನಿಸುತ್ತಾರೆ. ಈ ವರ್ಷಗಳಲ್ಲಿಯೇ ಚೀನಾ ಎರಡು ವಿಭಿನ್ನ ವಿನಿಮಯ ದರಗಳನ್ನು ಒಗ್ಗೂಡಿಸಿ ಯುವಾನ್ ಮೌಲ್ಯವನ್ನು ಇಳಿಕೆ (Devaluation) ಮಾಡಲಾಯಿತು. ಪರಿಣಾಮ ಚೀನಾದ ರಫ್ತು ಸರಕುಗಳು ಜಗತ್ತಿನ ಮಾರುಕಟ್ಟೆಯಲ್ಲಿ ಅಗ್ಗವಾಗಿ ಸ್ಪರ್ಧಾತ್ಮಕವಾದವು. ಜೊತೆಗೆ ಮೇಡ್ ಇನ್ ಇಂಡಿಯಾ ವೇಗವಾಗಿ ಹರಡತೊಡಗಿತು. ಜೊತೆಗೆ ಜಪಾನ್, ಅಮೇರಿಕಾ, ಯುರೋಪಿನ ಕಂಪನಿಗಳು ಉತ್ಪಾದನೆಯನ್ನು ಚೀನಾಕ್ಕೆ ಸ್ಥಳಾಂತರಿಸಿದವು. ಇದಲ್ಲದೇ 1994–96ರಲ್ಲಿ ಚೀನಾ ಅತಿ ಹೆಚ್ಚು FDI ಸೆಳೆಯುವ ದೇಶಗಳಲ್ಲಿ ಒಂದಾಗಿ ಹೊರಹೊಮ್ಮಿತು. ತಂತ್ರಜ್ಞಾನ, ನಿರ್ವಹಣಾ ಕೌಶಲ್ಯ ಮತ್ತು ಜಾಗತಿಕ ಸರಪಳಿಗಳ ಪ್ರವೇಶ ದೊರೆಯಿತು. ಭಾರತದ ಮೇಲೆ ಚೀನಾದ ಒತ್ತಡ: 1994–96ರ ಅವಧಿಯಲ್ಲಿ ಚೀನಾ ಉತ್ಪಾದನಾ ಶಕ್ತಿ ಹಾಗೂ ಕಡಿಮೆ ವೆಚ್ಚದ ಕೈಗಾರಿಕಾ ಕ್ಷೇತ್ರವಾಗಿ ಜಾಗತಿಕವಾಗಿ ಬೆಳೆಯುತ್ತಿತ್ತು. ಈ ಅವಧಿಯಲ್ಲಿ ಭಾರತ ಆರ್ಥಿಕ ಸುಧಾರಣೆಯ ಆರಂಭಿಕ ಹಂತದಲ್ಲಿ ಇದ್ದುದರಿಂದ, ಸ್ಪರ್ಧಾತ್ಮಕ ಒತ್ತಡ ತೀವ್ರವಾಗಿ ಅನುಭವಿಸಬೇಕಾಯಿತು. ಚೀನಾದ ಸರಕುಗಳ ಪ್ರವೇಶ, ಮಾರುಕಟ್ಟೆಯಲ್ಲಿ ಸ್ಪರ್ಧೆ, ಮತ್ತು ದೇಶೀಯ ಉತ್ಪಾದನೆಯ ಮೇಲೆ ಪ್ರಭಾವಗಳು ಭಾರತಕ್ಕೆ ವಾಣಿಜ್ಯ ಕ್ಷೇತ್ರದಲ್ಲಿ ಒತ್ತಡವನ್ನುಂಟು ಮಾಡಿತು. ಇದಲ್ಲದೇ 1990ರ ದಶಕದಲ್ಲಿ ಭಾರತ–ಚೀನಾ ಗಡಿ ವಿಷಯದಲ್ಲಿ ಗಂಭೀರ ನೇರ ಘರ್ಷಣೆಗಳು ಕಡಿಮೆಯಾಗಿದ್ದರೂ, LAC (Line of Actual Control) ನಲ್ಲಿ ನಿಯಮಿತ ಪಟ್ರೋಲ್ ಮತ್ತು ಸೈನಿಕ ಕಾರ್ಯಾಚರಣೆಗಳು ಇದ್ದವು. ವಿಶ್ವದ ಉತ್ಪಾದನಾ ಹಾಗೂ ಆರ್ಥಿಕ ಶಕ್ತಿಕೇಂದ್ರವಾಗಿ ಹೊರ ಹೊಮ್ಮಿದ್ದ ಅಮೇರಿಕಾ: 1964–67ರಲ್ಲಿ ಶನಿ ಮೀನ ರಾಶಿಯಲ್ಲಿ ಇದ್ದಾಗ, ಅಮೇರಿಕಾ ಸಂಯುಕ್ತ ಸಂಸ್ಥಾನವು (USA) ವಿಶ್ವದ ಉತ್ಪಾದನಾ ಹಾಗೂ ಆರ್ಥಿಕ ಶಕ್ತಿಕೇಂದ್ರವಾಗಿತ್ತು ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ಅಂದರಂತೆಯೇ 1940–1970ರ ಅವಧಿಯನ್ನು ಅಮೇರಿಕಾದ Golden Era of Manufacturing ಎಂದು ಕರೆಯಲಾಗುತ್ತದೆ. ಕಾರು ಉದ್ಯಮ, ಉಕ್ಕು, ಯಂತ್ರೋಪಕರಣ, ವಿಮಾನೋದ್ಯಮ, ವಿದ್ಯುತ್ ಸಾಧನಗಳಲ್ಲಿ ಅಮೇರಿಕಾ ಮುಂಚೂಣಿಯನ್ನು ಪಡೆಯಿತು. ದ್ವಿತೀಯ ಮಹಾಯುದ್ಧದ ನಂತರ ಜಗತ್ತಿನ ಬಹುತೇಕ ಕೈಗಾರಿಕೆಗಳು ಅಮೇರಿಕಾ ಕೇಂದ್ರೀಕೃತವಾಗಿದ್ದವು. ಅಮೇರಿಕಾ ಆರ್ಥಿಕ ಶಕ್ತಿಕೇಂದ್ರ: 1964–67ರ ಅವಧಿಯಲ್ಲಿಯೇ ಡಾಲರ್ (USD) ವಿಶ್ವದ ಪ್ರಮುಖ ಕರೆನ್ಸಿಯಾಗಿ ಹೊರಹೊಮ್ಮಿತು. ವಿಶ್ವ ಬ್ಯಾಂಕ್, IMF ಮೊದಲಾದ ಸಂಸ್ಥೆಗಳು ಅಮೇರಿಕಾ ಪ್ರಭಾವದಲ್ಲಿ ರೂಪಗೊಂಡವು. ಜಗತ್ತಿನ ವ್ಯಾಪಾರ ಮತ್ತು ಹೂಡಿಕೆಗಳ ಕೇಂದ್ರವಾಗಿ ನ್ಯೂಯಾರ್ಕ್ – ವಾಲ್ ಸ್ಟ್ರೀಟ್ ಬೆಳೆದಿತು. ಈ ಅವಧಿಯನ್ನು ಜ್ಯೋತಿಷ್ಯ ಶನಿ ಮೀನ ರಾಶಿಯಲ್ಲಿ ಸಂಚರಿಸಿದ ಕಾಲ ಎಂದು ಗುರುತಿಸುತ್ತಾರೆ. ಜ್ಯೋತಿಷ್ಯ ವಿಶ್ಲೇಷಣೆಯಲ್ಲಿ ಇದನ್ನು ಜಾಗತಿಕ ಶಕ್ತಿ ವರ್ಗಾವಣೆಯ ಸಂಕೇತವೆಂದು ವ್ಯಾಖ್ಯಾನಿಸುತ್ತಾರೆ. ಇದನ್ನೂ ಓದಿ: ಉತ್ತರ ಭಾರತದ ಅತ್ಯುತ್ತಮ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಯೋಚಿಸುತ್ತಿದ್ದೀರಾ? ಉಪಯುಕ್ತ ಮಾಹಿತಿ ಇಲ್ಲಿದೆ ಭಾರತದ ಮೇಲೆ ಅಮೆರಿಕಾ ಒತ್ತಡ: 1964–67ರ ಅವಧಿಯಲ್ಲಿ ಆರ್ಥಿಕ ಸುಧಾರಣೆಯ ಪ್ರಾರಂಭಿಕ ಹಂತದಲ್ಲಿದ್ದ ಭಾರತ, ಅಮೆರಿಕಾದ ಸಹಾಯಕ್ಕೆ ಹೆಚ್ಚು ಅವಲಂಬಿತವಾಗಿತ್ತು. ಈ ಸಂದರ್ಭದಲ್ಲಿ ಅಮೆರಿಕಾ ಭಾರತವನ್ನು ಆರ್ಥಿಕ ಮತ್ತು ವ್ಯಾಪಾರ-ನಿಯಂತ್ರಣಗಳ ಮೂಲಕ ತನ್ನ ರಾಜಕೀಯ ಪ್ರಭಾವಕ್ಕೆ ಒಳಪಡಿಸಲು ಪ್ರಯತ್ನಿಸುತ್ತಿತ್ತು. ಅಮೆರಿಕಾ ಒತ್ತಡವು ಪ್ರಮುಖವಾಗಿ ಆರ್ಥಿಕ ಮತ್ತು ರಾಜಕೀಯ ಸ್ವರೂಪದಲ್ಲಿ ಇದ್ದು, ಭಾರತದ ಸ್ವತಂತ್ರ ನಿರ್ಧಾರಗಳಿಗೆ ಪ್ರಭಾವ ಬೀರುತ್ತಿತ್ತು. ಮುಂದಿನ 30 ವರ್ಷಗಳಲ್ಲಿ ಜಾಗತಿಕ ಶಕ್ತಿಕೇಂದ್ರವಾಗಿ ಭಾರತ; ಭವಿಷ್ಯ ನುಡಿ: ಇದೀಗ 2025–27ರಲ್ಲಿ ಶನಿ ಮೀನ ರಾಶಿಯಲ್ಲಿ ಸಾಗುತ್ತಿರುವುದರಿಂದ, ಅಮೆರಿಕಾ, ಚೀನಾದ ಬಳಿಕ ಈ ಶಕ್ತಿ ಭಾರತಕ್ಕೆ ವರ್ಗಾವಣೆಯಾಗಲಿದೆ. ಈ ಮೂಲಕ ಮುಂದಿನ 30 ವರ್ಷಗಳಲ್ಲಿ ಭಾರತ ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯಲಿದೆ ಎಂದು ಜ್ಯೋತಿಷಿ ಶರ್ಮಿಷ್ಠಾ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂಬ ಭವಿಷ್ಯ ಹೊರಬಿದ್ದಿದೆ. ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಫೋನ್; ಭಯೋತ್ಪಾದನೆ, ಗಾಜಾ ಶಾಂತಿ ಯೋಜನೆಯ ಬಗ್ಗೆ ಚರ್ಚೆ

ನವದೆಹಲಿ, ಡಿಸೆಂಬರ್ 10: ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಇಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಕರೆ ಮಾಡಿದ್ದಾರೆ. ಇಬ್ಬರೂ ನಾಯಕರು ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದ್ದಾರೆ. ಭಯೋತ್ಪಾದನೆಯ ಬಗ್ಗೆ ಭಾರತ ಶೂನ್ಯ ಸಹಿಷ್ಣುತೆಯನ್ನು ಪ್ರಧಾನಿ ಮೋದಿ ಈ ವೇಳೆ ಪುನರುಚ್ಚರಿಸಿದ್ದಾರೆ. ಈ ವೇಳೆ ಭಯೋತ್ಪಾದನೆ ಮತ್ತು ಗಾಜಾ ಶಾಂತಿ ಯೋಜನೆಯ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದ್ದಾರೆ. ಗಾಜಾ ಶಾಂತಿ ಯೋಜನೆಗೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಮುಂದುವರಿದ ಬೆಳವಣಿಗೆಯ ಬಗ್ಗೆ ಮೋದಿ ಮತ್ತು ನೆತನ್ಯಾಹು ತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಗಾಜಾ ಶಾಂತಿ ಯೋಜನೆಯ ಆರಂಭಿಕ ಅನುಷ್ಠಾನ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಸ್ಥಾಪಿಸುವ ಪ್ರಯತ್ನಗಳಿಗೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಅವರು ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಿದ್ದು, ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ಬಗ್ಗೆ ತಮ್ಮ ಶೂನ್ಯ ಸಹಿಷ್ಣುತೆಯ ನಿಲುವನ್ನು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಪುಟಿನ್ ಭೇಟಿ ಭಾರತ-ರಷ್ಯಾ ಬಾಂಧವ್ಯಕ್ಕೆ ಚೈತನ್ಯ ತುಂಬಲಿದೆ; ಪ್ರಧಾನಿ ಮೋದಿ ಯುಎಸ್ ಬೆಂಬಲಿತ ಗಾಜಾ ಕದನ ವಿರಾಮ ಯೋಜನೆಯ ಎರಡನೇ ಹಂತವು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸುವುದಾಗಿ ನೆತನ್ಯಾಹು ಹೇಳಿದ ನಂತರ ಅವರು ಮೋದಿಗೆ ಕರೆ ಮಾಡಿದ್ದಾರೆ. ಆದರೆ, ನೆತನ್ಯಾಹು ಈ ಹೇಳಿಕೆ ನೀಡಿದ್ದರೂ ಇಸ್ರೇಲ್ ದೇಶದ ಉಲ್ಲಂಘನೆಗಳು ಮುಂದುವರಿದಿರುವುದರಿಂದ ಕದನ ವಿರಾಮ ಯೋಜನೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಹಮಾಸ್ ಹೇಳಿದೆ. ಈ ಒಪ್ಪಂದವನ್ನು ಗೌರವಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೇರಲು ಮಧ್ಯವರ್ತಿಗಳಿಗೆ ಕರೆ ನೀಡಿದೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Goa NightClub Fire: ಥೈಲ್ಯಾಂಡ್ಗೆ ಓಡಿ ಹೋಗಿ ತಲೆಮರೆಸಿಕೊಂಡಿದ್ದ ಗೋವಾ ನೈಟ್‌ಕ್ಲಬ್ ಮಾಲೀಕರ ಬಂಧನ

ನೈಟ್‌ಕ್ಲಬ್‌ನಲ್ಲಿ ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಥೈಲ್ಯಾಂಡ್(Thailand)ಗೆ ಪರಾರಿಯಾಗಿದ್ದ ಗೋವಾದ ರೋಮಿಯೋ ಲೇನ್ ನೈಟ್‌ಕ್ಲಬ್ ಮಾಲೀಕರನ್ನು ಬಂಧಿಸಲಾಗಿದೆ. ಇತ್ತೀಚೆಗೆ ಕ್ಲಬ್ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯನ್ನು ಗೋವಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ದುರಂತದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಕ್ಲಬ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂತ್ರಾ ರೋಮಿಯೋ ಲೇನ್ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಿದ್ದರು. ಪಣಜಿ, ಡಿಸೆಂಬರ್ 11: ನೈಟ್‌ಕ್ಲಬ್‌ನಲ್ಲಿ ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಥೈಲ್ಯಾಂಡ್(Thailand)ಗೆ ಪರಾರಿಯಾಗಿದ್ದ ಗೋವಾದ ರೋಮಿಯೋ ಲೇನ್ ನೈಟ್‌ಕ್ಲಬ್ ಮಾಲೀಕರನ್ನು ಬಂಧಿಸಲಾಗಿದೆ. ಇತ್ತೀಚೆಗೆ ಕ್ಲಬ್ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯನ್ನು ಗೋವಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ದುರಂತದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಕ್ಲಬ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂತ್ರಾ ರೋಮಿಯೋ ಲೇನ್ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಿದ್ದರು. ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿಯ ನಂತರ ದೇಶದಿಂದ ಪಲಾಯನ ಮಾಡಿದ ಲೂತ್ರಾ ಸಹೋದರರ ಒಡೆತನದ ಗೋವಾದ ವಾಗೇಟರ್ ಪ್ರದೇಶದಲ್ಲಿರುವ ರೋಮಿಯೋ ಲೇನ್ ರೆಸ್ಟೋರೆಂಟ್ ಅನ್ನು ಕೆಡವಲಾಯಿತು. ಗೌರವ್ ಲೂತ್ರಾ ಮತ್ತು ಸೌರಭ್ ಲೂತ್ರಾ ಇದರ ಮಾಲೀಕರು. ರೋಮಿಯೋ ಲೇನ್ ಬಳಿ ಇರುವ ಅವರ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್ ಡಿಸೆಂಬರ್ 7 ರಂದು ಬೆಂಕಿಗೆ ಆಹುತಿಯಾಗಿ 25 ಜನರು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕ್ಲಬ್‌ನ ಮಾಲೀಕರನ್ನು ಥೈಲ್ಯಾಂಡ್ನಲ್ಲಿ ಬಂಧಿಸಲಾಗಿದೆ. ಶೀಘ್ರದಲ್ಲೇ ಭಾರತಕ್ಕೆ ಕರೆತರುವ ಸಾಧ್ಯತೆಯಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಹೊಸ ವರ್ಷದ ಆಚರಣೆಗಾಗಿ ಹೆಚ್ಚಿನ ಸಂಖ್ಯೆಯ ಸ್ಥಳೀಯರು ಮತ್ತು ವಿದೇಶಿಯರು ಗೋವಾಕ್ಕೆ ಆಗಮಿಸುತ್ತಿರುವ ಸಮಯದಲ್ಲಿ ಗೋವಾ ನೈಟ್‌ಕ್ಲಬ್ ಬೆಂಕಿ ದುರಂತ ಸಂಭವಿಸಿದೆ. ಮತ್ತಷ್ಟು ಓದಿ: ಗೋವಾ ನೈಟ್‌ಕ್ಲಬ್ ಬೆಂಕಿ ದುರಂತದಲ್ಲಿ 25 ಜನ ಸಾವು; ಮಾಲೀಕರು ಥೈಲ್ಯಾಂಡ್ಗೆ ಪರಾರಿ ಕ್ಲಬ್‌ನ ನಾಲ್ವರು ಮಾಲೀಕರ ಪೈಕಿ ಒಬ್ಬನನ್ನು ಪೊಲೀಸರು ಬುಧವಾರ ಬಂಧಿಸಿದ್ದರು. ಅಜಯ್ ಗುಪ್ತಾನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಲುಕ್‌ಔಟ್ ನೋಟಿಸ್ ಹೊರಡಿಸಿದ ಬಳಿಕ ಬಂಧಿಸಲಾಗಿದೆ. ಬೆನ್ನುಮೂಳೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಗುಪ್ತಾ ದೆಹಲಿಯ ಲಜಪತ್ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಗೋವಾದ ಅರ್ಪೋರಾದ ಜನಪ್ರಿಯ ನೈಟ್‌ಕ್ಲಬ್‌ನಲ್ಲಿ ಹಲವಾರು ಸುರಕ್ಷತಾ ಅಪಾಯಗಳ ಪರಿಣಾಮವಾಗಿ ಸಂಭವಿಸಿದ ಬೆಂಕಿಯ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಗೋವಾ ಪೊಲೀಸರು ಅವರ ಪಾಸ್‌ಪೋರ್ಟ್‌ಗಳನ್ನು ಅಮಾನತುಗೊಳಿಸಿ ವಿದೇಶಾಂಗ ಸಚಿವಾಲಯವನ್ನು ವಿನಂತಿಸಿದ ಸ್ವಲ್ಪ ಸಮಯದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಮೌಂಟು, ಟ್ಯಾಲೆಂಟು ಎರಡೂ ಇದ್ರೆ ಮಾತ್ರ ತೆರೆಯುತ್ತೆ ಅಮೆರಿಕದ ಗೇಟು; ಇಲ್ಲಿದೆ ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ರೇಟು

US president Donald Trump unveils Gold Card Visa system: ಅಮೆರಿಕಕ್ಕೆ ಹಣ ಮತ್ತು ಪ್ರತಿಭೆಗಳನ್ನು ಸೆಳೆಯಲು ಡೊನಾಲ್ಡ್ ಟ್ರಂಪ್ ವಿವಿಧ ಮಾರ್ಗೋಪಾಯ ಅನುಸರಿಸುತ್ತಿದ್ದಾರೆ. ಇದರ ಭಾಗವಾಗಿ ಗೋಲ್ಡ್ ಕಾರ್ಡ್ ಎನ್ನುವ ಹೊಸ ವೀಸಾ ಉತ್ಪನ್ನವನ್ನು ಅನಾವರಣಗೊಳಿಸಿದ್ದಾರೆ. ಒಬ್ಬ ವ್ಯಕ್ತಿ ಅಮೆರಿಕದ ಗೋಲ್ಡ್ ಕಾರ್ಡ್ ವೀಸಾ ಪಡೆಯಲು ಕನಿಷ್ಠ 9 ಕೋಟಿ ರೂ ವ್ಯಯಿಸಬೇಕಾಗುತ್ತದೆ. ಗೋಲ್ಡ್ ಕಾರ್ಡ್ ವೀಸಾ ವಾಷಿಂಗ್ಟನ್, ಡಿಸೆಂಬರ್ 11: ಇಲ್ಲಿಗೆ ಬಂದು ಓದಿದ ಬುದ್ಧಿವಂತರನ್ನು ವಾಪಸ್ ಭಾರತಕ್ಕೆ ಕಳುಹಿಸೋದ್ಹೇಗ್ರೀ… ಶೇಮ್ ಶೇಮ್… ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ವರಸೆಯ ಹೊಸ ವರ್ಶನ್. ಟ್ರಂಪ್ ಅವರು ವಲಸಿಗರಿಗಾಗಿ ‘ಗೋಲ್ಡ್ ಕಾರ್ಡ್’ ವೀಸಾ ಉತ್ಪನ್ನವನ್ನು ಅನಾವರಣಗೊಳಿಸುತ್ತಾ, ತಮ್ಮ ಹೊಸ ನೀತಿಯ ಸಾಧಕಗಳನ್ನು ವಿವರಿಸಿದ್ದಾರೆ. ಈ ಹೊಸ ನೀತಿಯ ಪ್ರಕಾರ, ಹಣಬಲ ಮತ್ತು ಬುದ್ಧಿಬಲ ಎರಡೂ ಇರುವ ವಲಸಿಗರು ಮಾತ್ರ ಅಮೆರಿಕಕ್ಕೆ ಹೋಗಿ ಅಲ್ಲಿ ಕೆಲಸ ಮಾಡುತ್ತಾ, ಪೌರತ್ವ ಪಡೆಯಲು ಅವಕಾಶ ಇರುತ್ತದೆ. ಈ ಹೊಸ ನೀತಿಯಿಂದ ಡೊನಾಲ್ಡ್ ಟ್ರಂಪ್ ಒಂದೇ ಕಲ್ಲಿಗೆ ಎರಡು ಹಣ್ಣುಗಳನ್ನು ಉದುರಿಸಲು ನೋಡುತ್ತಿದ್ದಾರೆ. ಒಂದು, ಅಮೆರಿಕಕ್ಕೆ ಬಹಳ ಕೊರತೆಯಾಗಿರುವ ಪ್ರತಿಭೆಗಳನ್ನು ಸೆಳೆಯುವುದು. ಇನ್ನೊಂದು ಫಲ ಎಂದರೆ, ಅನವಶ್ಯಕ ವಲಸೆಯನ್ನು ನಿರ್ಬಂಧಿಸುವುದು. ಗೋಲ್ಡ್ ಕಾರ್ಡ್ ವೀಸಾ ಬೇಕೆಂದರೆ ಹಣ ಚೆಲ್ಲಬೇಕು, ಪ್ರತಿಭೆ ತೋರಿಸಬೇಕು… ಅಮೆರಿಕದ ಹೊಸ ‘ಗೋಲ್ಡ್ ಕಾರ್ಡ್’ ವೀಸಾ ನೀತಿ ಪ್ರಕಾರ, ಅಮೆರಿಕಕ್ಕೆ ವಲಸೆ ಹೋಗಬಯಸುವ ವ್ಯಕ್ತಿಗಳು ಒಂದು ಮಿಲಿಯನ್ ಡಾಲರ್ ಹಣವನ್ನು ದಾನವಾಗಿ ಸರ್ಕಾರಕ್ಕೆ ಕೊಡಬೇಕು. ಒಂದು ಮಿಲಿಯನ್ ಡಾಲರ್ ಎಂದರೆ ಸುಮಾರು 9 ಕೋಟಿ ರೂಪಾಯಿ ಆಗುತ್ತದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಶೇ. 19, ಭಾರತಕ್ಕೆ ಶೇ. 50 ಸುಂಕ ಹಾಕಿದ್ದೇಕೆ ಅಮೆರಿಕ? ರಘುರಾಮ್ ರಾಜನ್ ಹೇಳಿದ್ದಿದು ಗೋಲ್ಡ್ ಕಾರ್ಡ್ ವೀಸಾಗೆ ಅರ್ಜಿ ಸಲ್ಲಿಸುವವರು ಮೊದಲಿಗೆ ಅಮೆರಿಕದ ಗೃಹ ಭದ್ರತೆ ಇಲಾಖೆಗೆ 15,000 ಡಾಲರ್ (ಸುಮಾರು 14 ಲಕ್ಷ ರೂ) ಹಣವನ್ನು ಪ್ರೋಸಸಿಂಗ್ ಫೀ ಆಗಿ ಕೊಡಬೇಕು. ಈ ಹಣ ನಾನ್-ರೀಫಂಡಬಲ್. ಅಂದರೆ ನಿಮಗೆ ವೀಸಾ ಸಿಗಲಿ, ಬಿಡಲಿ, ಈ ಹಣ ವಾಪಸ್ ಬರೋದಿಲ್ಲ. ಇದಾದ ಬಳಿಕ ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ. ಅಮೆರಿಕಕ್ಕೆ ಅನುಕೂಲವಾಗಿ ಪರಿಣಮಿಸಬಲ್ಲಷ್ಟು ಬುದ್ಧಿಮಂತಿಕೆ, ನಿಷ್ಠೆ ನಿಮ್ಮಲ್ಲಿದೆಯಾ ಎಂದು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ನಂತರ, ನೀವು ಅಮೆರಿಕದ ಹಣಕಾಸು ಇಲಾಖೆಗೆ ಒಂದು ಮಿಲಿಯನ್ ಡಾಲರ್ ಅನ್ನು ಡೊನೇಟ್ ಮಾಡಬೇಕಾಗುತ್ತದೆ. ಎರಡು ಮಿಲಿಯನ್ ಡಾಲರ್ ಕಾರ್ಪೊರೇಟ್ ಸ್ಪಾನ್ಸರ್ಶಿಪ್ಗೂ ಅವಕಾಶ ವಿದೇಶೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಬಯಸುವ ಅಮೆರಿಕನ್ ಕಂಪನಿಗಳು, ಪ್ರತೀ ಉದ್ಯೋಗಿಗೆ ಎರಡು ಮಿಲಿಯನ್ ಡಾಲರ್ ಲೆಕ್ಕದಲ್ಲಿ ಹಣವನ್ನು ಸರ್ಕಾರಕ್ಕೆ ದಾನವಾಗಿ ಕೊಡಬೇಕು. ಸುಮಾರು 18 ಕೋಟಿ ರೂ ಅನ್ನು ಸರ್ಕಾರಕ್ಕೆ ಕೊಡಬೇಕು. ಹಾಗಾದಾಗ, ಗೋಲ್ಡ್ ಕಾರ್ಡ್ ವೀಸಾ ಸಿಗುತ್ತದೆ. ಇದರ ಜೊತೆಗೆ ಪ್ರೋಸಸಿಂಗ್ ಫೀ ಇತ್ಯಾದಿಯನ್ನೂ ಕಂಪನಿಯೇ ಸ್ಪಾನ್ಸರ್ ಮಾಡಬೇಕು. ಇದನ್ನೂ ಓದಿ: ಭಾರತೀಯ ಅಕ್ಕಿ ಮೇಲೆ ಟ್ರಂಪ್ ಕಣ್ಣು; ಟ್ಯಾರಿಫ್ ಹೆಚ್ಚಿಸಿದರೆ ಭಾರತದ ಮೇಲೇನು ಪರಿಣಾಮ? ಇಲ್ಲಿಯೂ ಕೂಡ ಉದ್ಯೋಗಿಯು ಪ್ರತಿಭಾನ್ವಿತನಾಗಿರಬೇಕು ಎಂಬ ಷರತ್ತು ಇರುತ್ತದೆ. ಈ ವ್ಯಕ್ತಿ ಐದು ವರ್ಷ ಅಮೆರಿಕದಲ್ಲಿ ಇದ್ದು ತನ್ನ ತಾಕತ್ತು ಸಾಬೀತುಪಡಿಸಿದ ಬಳಿಕ ಅವರಿಗೆ ಆ ದೇಶದ ಪೌರತ್ವ ಸಿಗುತ್ತದೆ. ಒಂದು ವೇಳೆ, ಅವರಿಗೆ ಪೌರತ್ವ ಸಿಕ್ಕ ಬಳಿಕ ಅವರ ಹೆಸರಿನಲ್ಲಿ ಸರ್ಕಾರಕ್ಕೆ ಮಾಡಿದ್ದ ಎರಡು ಮಿಲಿಯನ್ ಡಾಲರ್ ಡೊನೇಶನ್ ಅನ್ನು ಬೇರೊಬ್ಬ ಉದ್ಯೋಗಿಯ ಹೆಸರಿಗೆ ವರ್ಗಾಯಿಸಲು ಕಂಪನಿಗಳಿಗೆ ಅವಕಾಶ ಇರುತ್ತದೆ. ಅಮೆರಿಕದ ಯೂನಿವರ್ಸಿಟಿಗಳಲ್ಲಿ ಓದಿದ ವಿದೇಶೀ ವಿದ್ಯಾರ್ಥಿಗಳನ್ನು ಕ್ಯಾಂಪಸ್ನಲ್ಲೇ ನೇಮಕಾತಿ ಮಾಡಿಕೊಳ್ಳುವ ಕಾರ್ಯಕ್ಕೂ ಈ ಗೋಲ್ಡ್ ಕಾರ್ಡ್ ವೀಸಾ ನೀತಿ ಅನ್ವಯ ಆಗುತ್ತದೆ.
ಕನಕನ ಕಿಂಡಿ ಸ್ವರ್ಣ ಕವಚ ಉದ್ಘಾಟನೆ ವಿವಾದ: ಗೊಂದಲಗಳಿಗೆ ಪ್ರಮೋದ್ ಮಧ್ವರಾಜ್ ತೆರೆ

ಶ್ರೀಕೃಷ್ಣ ಮಠದ ಕನಕನ ಕಿಂಡಿ ಸ್ವರ್ಣ ಕವಚವನ್ನು ಪ್ರಧಾನಿ ಮೋದಿ ಉದ್ಘಾಟಿಸಿದಾಗ, ದಾನಿ ಪ್ರಮೋದ್ ಮಧ್ವರಾಜ್‌ಗೆ ಆಹ್ವಾನವಿರಲಿಲ್ಲ. ಇದೇ ವಿಚಾರವೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಆದರೆ, ಕಡೆಗಣನೆ ಆರೋಪಗಳನ್ನು ತಳ್ಳಿಹಾಕಿದ ಮಧ್ವರಾಜ್, ಪ್ರಧಾನಿ ಉದ್ಘಾಟಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರೂ ಪ್ರಮೋದ್ ಮಧ್ವರಾಜ್ ಅವರಿಗೆ ಆಹ್ವಾನ ಇಲ್ಲದಿದ್ಧ ಬಗ್ಗೆ ಸ್ಪಷ್ಟನೆ ನೀಡಿದ್ದು, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದಿದ್ದಾರೆ. ಉಡುಪಿ, ಡಿಸೆಂಬರ್ 01: ಶ್ರೀಕೃಷ್ಣ ಮಠಕ್ಕೆ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಪ್ರಮೋದ್ ಮಧ್ವರಾಜ್ ಕೊಡುಗೆ ನೀಡಿದ್ದ ಕನಕನ ಕಿಂಡಿಯ ಸ್ವರ್ಣ ಕವಚವನ್ನು ಉದ್ಘಾಟಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಮಾಜಿ ಸಚಿವರಿಗೆ ಆಹ್ವಾನ ಇರಲಿಲ್ಲ. ಇದೇ ವಿಚಾರವೀಗ ರಾಜಕೀಯವಾಗಿ ಒಂದಿಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಕೊಡುಗೆ ನೀಡಿದ್ದು ಬಿಜೆಪಿ ಮುಖಂಡರೇ ಆದರೂ ಅವರನ್ನು ಸೈಡ್ಲೈನ್ ಮಾಡಲಾಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ಆರಂಭವಾಗಿರು ಕಾರಣ ಪ್ರಮೋದ್ ಮಧ್ವರಾಜ್ ಅವರೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ‘ನನ್ನ ಕಡೆಗಣಿಸಿದ್ದಾರೆಂದು ಅನಿಸುತ್ತಿಲ್ಲ’ ಜಿಲ್ಲಾ ಬಿಜೆಪಿ ನಾಯಕರು ಪ್ರಮೋದ್ ಮಧ್ವರಾಜ್ ಅವರ ಜೊತೆಯಾಗಿ ಇಂದು ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಎಲ್ಲ ಊಹಾಪೋಹಗಳಿಗೂ ಮಾಜಿ ಸಚಿವರು ಉತ್ತರಿಸಿದ್ದಾರೆ.ತಮ್ಮ ಹಿಂದಿನ ಹೇಳಿಕೆಗಳಲ್ಲಿ ಅಸಮಾಧಾನದ ಭಾವನೆ ಇರಲಿಲ್ಲ. ನನ್ನ ಸೇವೆಯನ್ನು ಪ್ರಧಾನಿ ಉದ್ಘಾಟಿಸಿರುವುದು ನನಗೆ ಅಪಾರ ಸಂತೋಷ ಎಂದು ಅವರು ಪುನರುಚ್ಛರಿಸಿದ್ದಾರೆ. ಮಠದವರಾಗಲಿ, ಜಿಲ್ಲಾ ಬಿಜೆಪಿ ನಾಯಕರಾಗಲಿ ಯಾರೂ ಕೂಡ ನನ್ನ ಕಡೆಗಣಿಸಿದ್ದಾರೆ ಎನಿಸುತ್ತಿಲ್ಲ. ಅದನ್ನು ಹುಡುಕುವ ಪ್ರಯತ್ನವನ್ನೂ ನಾನು ಮಾಡಿಲ್ಲ ಎಂದಿದ್ದಾರೆ. ಕನಕನ ಕಿಂಡಿಗೆ ಸ್ವರ್ಣ ಕವಚ ದಾನ ಮಾಡಿದ ವ್ಯಕ್ತಿಯಾಗಿ ಪ್ರಧಾನಿಯ ಉದ್ಘಾಟನಾ ಕ್ಷಣವನ್ನು ಸ್ಥಳದಲ್ಲೇ ನಿಂತು ವೀಕ್ಷಿಸುವ ಆಸೆ ಇದ್ದರೂ ಅದು ಸಾಧ್ಯವಾಗಿಲ್ಲ. ಈ ಬಗ್ಗೆ ನನ್ನ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡವರಿಗೆ ಧನ್ಯವಾದ ತಿಳಿಸೋದಾಗಿಯೂ ಅವರು ಹೇಳಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣ ಮಠದಲ್ಲಿ ಕನಕನ ಕಿಂಡಿ ಸ್ವರ್ಣ ಕವಚ ಲೋಕಾರ್ಪಣೆ ಮಾಡಿದ ನಮೋ ಇನ್ನು ಈ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕೂಡ ಸ್ಪಷ್ಟನೆ ನೀಡಿದ್ದಾರೆ. ಮಠ ಮತ್ತು ನಮ್ಮಿಂದ ಕಳುಹಿಸಿದ ಅತಿಥಿಗಳ ಪಟ್ಟಿಯಲ್ಲಿ ಪ್ರಮೋದ್ ಮಧ್ವರಾಜ್ ಅವರ ಹೆಸರು ಸೇರಿಸಲಾಗಿತ್ತು. ಆದರೆ ಪ್ರಧಾನಿಯ ಕಚೇರಿಯಿಂದ ಪರಿಷ್ಕೃತ ಪಟ್ಟಿಯನ್ನು ಕಳುಹಿಸಿದಾಗ ಅವರು ಸೇರಿದಂತೆ ಹಲವು ಹೆಸರುಗಳು ಇರಲಿಲ್ಲ. ಇದರಲ್ಲಿ ಜಿಲ್ಲಾ ಬಿಜೆಪಿ ಯಾವುದೇ ರೀತಿಯಲ್ಲೂ ಪಾತ್ರವಹಿಸಿಲ್ಲ. ಪ್ರಮೋದ್ ಮಧ್ವರಾಜ್ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಹಾಲು–ಸಕ್ಕರೆ ಬೆರೆತಂತೆ ಬಿಜೆಪಿ ಮತ್ತು ಪ್ರಮೋದ್ ಮಧ್ವರಾಜ್ ಒಟ್ಟಿಗಿದ್ದೇವೆ ಎಂದಿದ್ದಾರೆ. ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಶಾಲಾ ವಾಹನಗಳನ್ನ ಟಾರ್ಗೆಟ್ ಮಾಡಿದ ಖದೀಮರು: ಅಪಘಾತವಾದ್ರೆ ದೇವರೇ ಗತಿ!

ಶಾಲೆಗಳ ವಾಹನಗಳಿಗೆ ವಿಮೆ ಮಾಡಿಸಿಕೊಡುತ್ತೇವೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಾಲೆಯೊಂದರ ವಾಹನದ ವಿಮೆಯ ಹಣ ಕ್ಲೇಮ್ ಮಾಡಲು ಮುಂದಾದಾಗ, ಈ ನಕಲಿ ಜಾಲ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಉಡುಪಿ, ಡಿಸೆಂಬರ್ 03: ಶಾಲಾ ವಾಹನಗಳ (school van) ವಿಮೆಯ (Insurance) ಹೆಸರಲ್ಲಿ ವಂಚಿಸುವ ಜಾಲವೊಂದು ಸಕ್ರಿಯವಾಗಿದೆ. ಇತ್ತೀಚಿಗೆ ಉಡುಪಿಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇವರ ಖತರ್ನಾಕ್ ಐಡಿಯಾಗಳನ್ನು ಕಂಡು ಪೊಲೀಸರೇ ಬೆಚ್ಚಿಬಿದಿದ್ದಾರೆ. ಈ ಆರೋಪಿಗಳ ಕರಾಮತ್ತು ಗಮನಿಸಿದರೆ, ಎಲ್ಲಾ ಶಾಲೆಗಳು ಒಂದು ಬಾರಿ ತಮ್ಮ ವಾಹನ ವಿಮೆ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ವಿಮೆ ಮಾಡಿಸಿಕೊಡುವ ನೆಪದಲ್ಲಿ ಮೋಸ ಇತ್ತೀಚಿಗೆ ಉಡುಪಿಯಲ್ಲಿ ರಾಕೇಶ್ ಹಾಗೂ ಚರಣ್ ಬಾಬು ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶಾಲೆಗಳ ವಾಹನಗಳಿಗೆ ವಿಮೆ ಮಾಡಿಸಿಕೊಡುತ್ತೇವೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಇವರು ವಂಚಿಸುತ್ತಿದ್ದರು. ಇಷ್ಟಕ್ಕೂ ಇವರ ಬಂಡವಾಳವಾದರೂ ಏನು ಗೊತ್ತಾ? ಶಾಲಾ ವಾಹನಗಳು ಅಪಘಾತವಾಗುವುದು ಅಪರೂಪ. ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕು ಎಂಬ ಜವಾಬ್ದಾರಿಯಲ್ಲಿ ವೇಗದ ಮಿತಿ ಮೀರದೆ ಚಾಲಕರು ಶಾಲಾ ವಾಹನ ಓಡಿಸುತ್ತಾರೆ. ಹಾಗಾಗಿ ತಾವು ಮಾಡುತ್ತಿರುವ ವಂಚನೆ ಶಾಲೆಗಳ ಗಮನಕ್ಕೆ ಬರುವುದಿಲ್ಲ ಎಂಬುವುದು ಈ ಖತರ್ನಾಕ್ ಆಸಾಮಿಗಳಿಗೆ ಮೊದಲೇ ಗೊತ್ತಿತ್ತು. ಈ ವಿಶ್ವಾಸದಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಶಾಲಾ ವಾಹನಗಳಿಗೆ ನಕಲಿ ವಿಮೆ ಮಾಡಿಸಿದ್ದರು. ಇದನ್ನೂ ಓದಿ: ಮದ್ಯಪಾನ ಮಾಡಿ ಶಾಲಾ ಬಸ್ ಚಾಲನೆ: 36 ಮಂದಿ ಚಾಲಕರ ವಿರುದ್ಧ ಕೇಸ್; ಡಿಎಲ್ ರದ್ದಿಗೂ ಶಿಫಾರಸು ಕೋಟದ ಹುಣಸೆಮಕ್ಕಿಯ ಶಾಲೆಯೊಂದರ ಶಾಲಾ ವಾಹನ ಇತ್ತೀಚೆಗೆ ಆಟೋಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ವಿಮೆಯ ಹಣ ಕ್ಲೇಮ್ ಮಾಡಲು ಮುಂದಾದಾಗ, ಈ ನಕಲಿ ಜಾಲ ಬೆಳಕಿಗೆ ಬಂದಿದೆ. ಆರೋಪಿಗಳಿಬ್ಬರು ಈ ಹಿಂದೆ ವಿಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಅನುಭವದ ಆಧಾರದಲ್ಲಿ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲಾ ವಾಹನಕ್ಕೆ ವಿಮೆ ಮಾಡಿಸುವುದಾಗಿ ವಂಚಿಸಿದ್ದಾರೆ. ಉಡುಪಿಯಲ್ಲಿ ಹತ್ತಾರು ಖಾಸಗಿ ಶಾಲೆಗಳಿದ್ದು, ಕೆಲ ಶಾಲೆಗಳಲ್ಲಿ ಐವತ್ತಕ್ಕೂ ಅಧಿಕ ವಾಹನಗಳಿವೆ. ಈ ವಂಚನೆಯ ಕುರಿತು ಪೊಲೀಸರ ಗಮನಕ್ಕೆ ಬಂದಾಗ ಎಲ್ಲಾ ಶಾಲೆಗಳಿಗೂ ಸೂಚನೆ ನೀಡಿದ್ದರು. ಈ ವೇಳೆ ಸುಮಾರು 46 ಶಾಲಾ ವಾಹನಗಳಿಗೆ ಸಂಬಂಧಿಸಿದಂತೆ ಐದು ಶಾಲೆಗಳಿಗೆ ವಂಚನೆಯಾದ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಯಾವುದೇ ಶಾಲಾ ವಾಹನ ಅಪಘಾತವಾಗಿ ವಿಮೆಯ ಹಣವನ್ನು ಕ್ಲೇಮ್ ಮಾಡುವ ಹಂತಕ್ಕೆ ಬರುವುದಿಲ್ಲ ಎನ್ನುವುದು ಈ ವಂಚಕರ ವಿಶ್ವಾಸವೇ ಬಂಡವಾಳವಾಗಿದೆ. ಇದನ್ನೂ ಓದಿ: ಎಲೆಕ್ಟ್ರಿಕ್ ಬಸ್ ಕಂಪನಿಗಳಿಗೆ ಬಿಎಂಟಿಸಿಯಿಂದ ಬರೋಬ್ಬರಿ 25 ಕೋಟಿ ರೂ. ದಂಡ! ಮಕ್ಕಳ ಸುರಕ್ಷತೆ ಮೊದಲ ಆದ್ಯತೆ. ಆದರೆ ವಂಚಕರಿಗೆ ಇದು ಕೂಡ ಒಂದು ಬಂಡವಾಳವಾಗುತ್ತೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಕೇವಲ ಕರಾವಳಿ ಮಾತ್ರವಲ್ಲ ರಾಜ್ಯದ ವಿವಿಧಡೆ ಈ ರೀತಿಯ ಜಾಲ ಇರಬಹುದು. ಯಾವುದಕ್ಕೂ ಒಂದು ಬಾರಿ ಶಾಲೆಗಳು ತಮ್ಮ ವಾಹನದ ವಿಮೆಯ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
10 ಬಾಂಗ್ಲಾ ಅಕ್ರಮ ವಲಸಿಗರಿಗೆ ಜೈಲು ಶಿಕ್ಷೆ ವಿಧಿಸಿದ ಉಡುಪಿ ಕೋರ್ಟ್

ಅಕ್ರಮವಾಗಿ ಬಂದಿದ್ದ ಬಾಂಗ್ಲಾದೇಶಿಗರು ಉಡುಪಿಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ್ದ್ದಾರೆ. ನಕಲಿ ಆಧಾರ್ ಸೃಷ್ಟಿಸಿಕೊಂಡು ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಅರಿಸಿಕೊಂಡು ಬಂದಿದ್ದರು. ಅನುಮಾಸ್ಪದ ಮೇಲೆ ಪೊಲೀಸರು, ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣ ಬಳಿ ಬಂಧಿಸಿದ್ದು, ಅ ವೇಳೆ ಅಕ್ರಮ ಬಾಂಗ್ಲಾ ಪ್ರಜೆಗಳು ಎನ್ನುವುದು ಗೊತ್ತಾಗಿದ್ದು, ಇದೀಗ ಒಂದು ವರ್ಷದ ಬಳಿಕ ಬಂಧಿತರಿಗೆ ಜಿಲ್ಲಾ ಕೋರ್ಟ್ ಶಿಕ್ಷಿ ವಿಧಿಸಿದೆ. ಉಡುಪಿ, (ಡಿಸೆಂಬರ್ 09): ಮಲ್ಪೆಯಲ್ಲಿ ಬಂಧಿತರಾಗಿದ್ದ 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರಿಗೆ (bangladeshi citizens) ಉಡುಪಿ (Udupi) ಜಿಲ್ಲಾ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿದೆ. ಬಾಂಗ್ಲಾ ದೇಶದಿಂದ ಅಕ್ರಮವಾಗಿ ಉಡುಪಿಗೆ ಬಂದಿದ್ದ ಹಕೀಮ್ ಆಲಿ, ಸುಜೋನ್ ಎಸ್.ಕೆ., ಇಸ್ಮಾಯಿಲ್ ಎಸ್.ಕೆ , ಕರೀಮ್ ಎಸ್.ಕೆ., ಸಲಾಂ ಎಸ್.ಕೆ., ರಾಜಿಕುಲ್ ಎಸ್.ಕೆ., ಮೊಹಮ್ಮದ್ ಸೋಜಿಬ್ , ರಿಮೂಲ್ , ಮೊಹಮ್ಮದ್ ಇಮಾಮ್ ಶೇಖ್, ಮೊಹಮ್ಮದ್ ಜಹಾಂಗಿರ್ ಆಲಂ ಶಿಕ್ಷೆಗೊಳಗಾದವರು. 2024ರ ಅ.11ರಂದು ಸಾಯಂಕಾಲ 7 ಗಂಟೆಗೆ ಮಲ್ಪೆ ಠಾಣೆ ಪಿಎಸ್ಐ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ 7 ಜನರು ಅನುಮಾನಸ್ಪದವಾಗಿ ಲಗೇಜ್ ಸಮೇತ ಒಡಾಡುತ್ತಿದ್ದರು. ಇದನ್ನು ಕಂಡು ವಿಚಾರಿಸಿದಾಗ ಆರೋಪಿತರು ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ದಾಖಲೆಗಳನ್ನು ಸೃಷ್ಟಿಸಿರುವುದು ಕಂಡುಬಂದಿತ್ತು. ಹೀಗಾಗಿ ಏಳು ಜನರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಉಡುಪಿ: ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಉದ್ಯೋಗಕ್ಕೆಂದು ಬಂದಿದ್ದ ಬಾಂಗ್ಲಾದ 9 ಪ್ರಜೆಗಳು ವಶ ಇನ್ನು ತನಿಖೆ ವೇಳೆ ಬಾಂಗ್ಲಾದೇಶದಿಂದ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿರುವುದಾಗಿ ಬಾಯ್ಬಿಟ್ಟಿದ್ದರು. ಅಲ್ಲದೇ ಇವರು ನೀಡಿದ ಮಾಹಿತಿಯಂತೆ ಉಳಿದ 3 ಮಂದಿ ಅಕ್ರಮ ವಲಸಿಗರನ್ನು ನಂತರ ಬಂಧಿಸಲಾಗಿತ್ತು. ಈ ಆರೋಪಿಗಳು ನಕಲಿ ಭಾರತೀಯ ದಾಖಲಾತಿ ಸೃಷ್ಟಿಸಿ ಉಡುಪಿಗೆ ಪ್ರವೇಶಿಸಿದ್ದರು.ಆರೋಪಿಗಳ ಪೈಕಿ ಸಿಕ್ಕಿಂ ಅಗರ್ತಲಾದ ಕಾಜೋಲ್ ಎಂಬಾತ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದಾನೆಂದು ತಿಳಿದುಬಂದಿತ್ತು. ಹಾಗೇ ಮತ್ತೋರ್ವ ಆರೋಪಿ ಉಸ್ಮಾನ್ ಎಂಬಾತ ಅಕ್ರಮವಾಗಿ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದ. ಸದ್ಯ ಮಲ್ಪೆ ಪೊಲೀಸರು, ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಿ ಅವರಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕುರ್ಚಿ ಕದನದ ನಡುವೆ ಸಿದ್ದರಾಮಯ್ಯಗೆ ಬಿಗ್ ಶಾಕ್: ಸುಪ್ರೀಂಕೋರ್ಟ್ನಿಂದ ನೋಟಿಸ್

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. 2023ರ ವರುಣಾ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿ ಗೆದ್ದಿದ್ದಾರೆ ಎಂಬ ಕೆ. ಶಂಕರ್ ಅವರ ಆರೋಪದ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿದೆ. ಚುನಾವಣಾ ಆಯೋಗಕ್ಕೂ ನೋಟಿಸ್ ನೀಡಲಾಗಿದ್ದು, ಈ ಹಿಂದೆ ಶಂಕರ್ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ದೆಹಲಿ, ಡಿಸೆಂಬರ್ 08: ಚುನಾವಣಾ ಅಕ್ರಮ ಆರೋಪ ಸಂಬಂಧ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಗೆಲುವನ್ನು ಪ್ರಶ್ನಿಸಿ ಕೆ. ಶಂಕರ್ ಎನ್ನುವರು ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ವಿಚಾರಣೆ ನಡೆಸಿರುವ ನ್ಯಾ. ವಿಕ್ರಮನಾಥ್ ನೇತೃತ್ವದ ದ್ವಿ ಸದಸ್ಯ ಪೀಠ, ಸಿದ್ದರಾಮಯ್ಯ ಮತ್ತು ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿದೆ. ಪ್ರಕರಣ ಏನು? 2023ರ ಚುನಾವಣೆಯಲ್ಲಿ ಮತದಾರರಿಗೆ ಗ್ಯಾರಂಟಿ ಯೋಜನೆಗಳ ಆಮಿಷ ನೀಡಿ ಸಿದ್ದರಾಮಯ್ಯ ಗೆದ್ದಿದ್ದಾರೆ. ಆಮಿಷಗಳ ಮೂಲಕ ಮತದಾರರನ್ನು ತಮ್ಮೆಡೆಗೆ ಸೆಳೆಯುವುದು ಚುನಾವಣಾ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಸಿದ್ದರಾಮಯ್ಯನರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಮೈಸೂರಿನ ವರುಣ ಹೋಬಳಿಯ ಕೂಡನಹಳ್ಳಿ ಗ್ರಾಮದ ಕೆ.ಎಂ. ಶಂಕರ್ ಆಗ್ರಹಿಸಿದ್ದರು. ಇದೇ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲು ಕೂಡ ಏರಿದ್ದರು. ಇದನ್ನೂ ಓದಿ: GST ದರ ಕಡಿತದಿಂದ ರಾಜ್ಯಗಳ ಆದಾಯಕ್ಕೆ ಹೊಡೆತ; ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (1) ಮತ್ತು ಸೆಕ್ಷನ್ 123 (2) ಪ್ರಕಾರ, ಚುನಾವಣಾ ಪ್ರಚಾರ ವೇಳೆ ಗ್ಯಾರಂಟಿಗಳನ್ನು ಘೋಷಿಸುವುದು ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಇದು ಆಮಿಷವಾಗಿದ್ದು, ಈ ರೀತಿ ಪ್ರಚಾರ ಮಾಡುವುದು ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (4)ರ ಪ್ರಕಾರವೂ ಒಪ್ಪತಕ್ಕದ್ದಲ್ಲ. ಜೊತೆಗೆ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಸಿದ್ದರಾಮಯ್ಯನವರಿಗೆ ಗೊತ್ತಿತ್ತು. ಗ್ಯಾರಂಟಿ ಕಾರ್ಡಿನ ಮೇಲೆ ಸ್ವತಃ ಅವರೇ ಸಹಿ ಮಾಡಿದ್ದಾರೆ. ಹೀಗಾಗಿ ಮತದಾರರಿಗೆ ಆಮಿಷ ನೀಡಿ ತಮಗೆ ಮತ ಚಲಾಯಿಸುವಂತೆ ನೋಡಿಕೊಳ್ಳಲಾಗಿದೆ ಎಂದು ಕೆ.ಎಂ. ಶಂಕರ್ ಹೇಳಿದ್ದರು. ಆದರೆ ಸಿದ್ದರಾಮಯ್ಯ ಅವರ ಪರವಾಗಿ ವಾದಿಸಿಸದ್ದ ಹಿರಿಯ ವಕೀಲ ರವಿವರ್ಮ ಕುಮಾರ್, ಶಂಕರ್ ಅವರ ಆರೋಪಗಳಿಗೆ ಕೌಂಟರ್ ಕೊಟ್ಟಿದ್ದರು. ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳಿಂದ ಆಶ್ವಾಸನೆಗಳನ್ನು ನೀಡುವುದಕ್ಕೆ ಅವಕಾಶವಿದೆ ಎಂದು ವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್ ಶಂಕರ್ ಅವರ ಅರ್ಜಿ ವಜಾಗೊಳಿಸಿತ್ತು. ಹೀಗಾಗಿ ಅವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.