ಬೆಳಗ್ಗೆ ನಮಾಜ್ಗೆ ಬಂದವನ ಅಟ್ಟಾಡಿಸಿ ಚುಚ್ಚಿ ಚುಚ್ಚಿ ಕೊಂದ ದುಷ್ಕರ್ಮಿಗಳು: ಸಿಸಿಟಿವಿ ವಿಡಿಯೋ ನೋಡಿ ಬೆಚ್ಚಿಬಿದ್ದ ಮೈಸೂರು ಜನ

ಅವರೆಲ್ಲಾ ಒಂದೇ ಏರಿಯಾದವರು. ಸಾಲದ್ದಕ್ಕೆ ದೋಸ್ತಿಗಳು. ಏರಿಯಾದಲ್ಲಿ ಸುತ್ತಾಡ್ಕೊಂಡು ಗಾಂಜಾ ನಶೆಯಲ್ಲಿ ತೇಲ್ತಾ ಇದ್ದವರು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜೊತೆಯಲ್ಲಿದ್ದವನನ್ನೇ ಇರಿದು ಕೊಂದಿದ್ದಾರೆ. ಬುಧವಾರ ಬೆಳಗ್ಗೆ ಮೈಸೂರಿನಲ್ಲಿ ನಡೆದ ಭಯಾನಕ ಕೊಲೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಮೈಸೂರು, ನವೆಂಬರ್ 27: ಸಾಂಸ್ಕೃತಿಕ ನಗರಿ ಮೈಸೂರು (Mysuru) ಬುಧವಾರ ಬೆಳ್ಳಂಬೆಳಗ್ಗೆಯೇ ಬೆಚ್ಚಿಬೀಳುವಂತಾಗಿದೆ. ಮೈಸೂರಿನ ಶಾಂತಿನಗರದ ಮಹಾಮದೀಯ ಮಸೀದಿ ಬಳಿಯ ಚೌಂಕಂಡಿ ಬಳಿ ಭೀಕರ ಕೊಲೆ ನಡೆದಿದೆ. ಶಾಂತಿ ನಗರದ ನಿವಾಸಿ ಸೈಯದ್ ಸೂಫಿಯನ ಕೊಲೆಯಾದ ಯುವಕ. ಈತ ಸ್ನೇಹಿತರಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾನೆ. ತಡರಾತ್ರಿ ಜೊತೆಗೆ ಇದ್ದ ಸೂಫಿಯಾನ ಸ್ನೇಹಿತರಾದ ಮೊಹಮ್ಮದ್ ಸಾಕಿಬ್, ರಾಹಿಲ್ ಅನ್ನೋ ಯುವಕರರು ಸೂಫಿಯನನನ್ನ ಶಾಂತಿ ನಗರದಲ್ಲಿ ಅಟ್ಟಾಡಿಸಿಕೊಂಡು ಕೊಂದಿದ್ದಾರೆ. ಮೃತ ಸೊಫಿಯಾನ, ಮೊಹಮ್ಮದ್ ಸಾಕಿಬ್, ರಾಹಿಲ್ ಎಲ್ಲರೂ ಒಂದೇ ಏರಿಯಾದವರು. ಎಲ್ಲಾ ಒಟ್ಟಿಗೆ ಇದ್ದವರು. ಬೆಳಗ್ಗೆ ನಮಾಜ್ಗೆಗೆ ಬಂದ ಸ್ನೇಹಿತನನ್ನು ಚಾಕುವಿನಿಂದ ಚುಚ್ಚಿ ಕೊಂದಿದ್ದಾರೆ. ಇನ್ನು ಪ್ರಾಥಮಿಕ ಮಾಹಿತಿ ಪ್ರಕಾರ, ಮೊಹಮ್ಮದ್ ಸಾಕಿಬ್ ಅಣ್ಣನ ಮೇಲೆ ಸೋಫಿಯಾನ ಹಲವು ದಿನಗಳ ಹಿಂದೆ ಹಲ್ಲೆ ಮಾಡಿದ್ದನಂತೆ. ಈ ವಿಚಾರದಲ್ಲಿ ಮೊಹಮದ್ ಸಾಕಿಬ್, ಸೋಫಿಯಾನ ನಡುವೆ ವೈಮನಸ್ಸು ಉಂಟಾಗಿತ್ತಂತೆ. ತಡರಾತ್ರಿಯೂ ಗಲಾಟೆ ನಡೆದಿತ್ತು ಎನ್ನಲಾಗಿದೆ. ಏರಿಯಾದಲ್ಲಿ ಗಾಂಜಾ, MDMA ಕೂಡ ಎಗ್ಗಿಲ್ಲದೆ ಸಿಗ್ತಾ ಇದ್ದು, ಎಲ್ಲೂ ನಶೆಯಲ್ಲೇ ಇದ್ದರು ಎನ್ನಲಾಗಿದೆ. ತಡರಾತ್ರಿ ಜೊತೆಗೆ ಇದ್ದು ಗಲಾಟೆ ಮಾಡ್ಕೊಂಡು ಹೋದವರು ಬೆಳಿಗ್ಗೆಯೇ ನಮಾಜ್ಗೆ ಎಂದು ಬಂದವನನ್ನು ಕಾದು ಕುಳಿತು ಕೊಲೆ ಮಾಡಿದ್ದಾರೆ. ಮೊಹಮ್ಮದ್ ಸಾಕಿಬ್, ರಾಹಿಲ್ ಇಬ್ಬರೂ ಸೇರಿ ಅಟ್ಟಾಡಿಸಿಕೊಂಡು ಕೊಂದಿದ್ದಾರೆ. ಸಿಸಿಟಿವಿ ವಿಡಿಯೋ ಸದ್ಯ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಉದಯಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ರಾಜ್ಯ ಸರ್ಕಾರ ಕಿಡಿಗೇಡಿಗಳಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ: ಸಂಸದ ಯದುವೀರ್ ವಾಗ್ದಾಳಿ ಯುವಕನ ಕೊಲೆ ವಿಚಾರವಾಗಿ ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿ, ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯ ಕಾಂಗ್ರೆಸ್ ಸರ್ಕಾರ ಕಿಡಿಗೇಡಿಗಳಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಒಂದು ಕಾಲದಲ್ಲಿ ಮೈಸೂರಿಗೆ ಪೋಲೀಸರ ಅವಶ್ಯಕತೆ ಇರಲಿಲ್ಲ. ಮೈಸೂರು ಶಾಂತಿಗೆ ಹೆಸರುವಾಸಿಯಾಗಿತ್ತು. ಇಂದು ಮೈಸೂರಿಗೆ ಇಂತಹ ಪರಿಸ್ಥಿತಿ ಬಂದಿದೆ. ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲ್ಲೆ ಘಟನೆ ನಂತರ ತಿಂಗಳಿಗೊಂದರಂತೆ ಕಾನೂನು ಸುವ್ಯವಸ್ಥೆ ವಿಫಲತೆಯಾಗುತ್ತಿದೆ. ಈಗ ಮತ್ತೊಂದು ಕೊಲೆ ನಡೆದಿದೆ. ಇತ್ತೀಚೆಗಷ್ಟೇ ಅರಮನೆ ಮುಂಭಾಗ ಕೊಲೆ ಪ್ರಕರಣಗಳು ನಡೆದಿದ್ದವು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಗದಗ: ತಲ್ವಾರ್, ಚಾಕುವಿನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಭಯಾನಕ ಘಟನೆಯ ವಿಡಿಯೋ ವೈರಲ್ ಮೈಸೂರು ಡ್ರಗ್ಸ್ ಮಾರಾಟ ಹಾಗೂ ಉತ್ಪಾದನೆ ಕೇಂದ್ರವಾಗಿದೆ. ಮೈಸೂರಿನಲ್ಲೇ ಶೆಡ್ ಹಾಕಿ ಡ್ರಗ್ಸ್ ಉತ್ಪಾದನೆ ಮಾಡುತ್ತಿದ್ದರು ಎಂದು ಯದುವೀರ್ ಹೇಳಿದ್ದಾರೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Mysuru: 40 ದಿನಗಳಲ್ಲಿ 22 ಹುಲಿ ಸೆರೆ; ನಿಟ್ಟುಸಿರು ಬಿಟ್ಟ ಕಾಡಂಚಿನ ಜನ

ಮೈಸೂರು ಭಾಗದಲ್ಲಿ ಹೆಚ್ಚಿದ್ದ ಹುಲಿ ದಾಳಿಗಳಿಂದ ಆತಂಕಗೊಂಡಿದ್ದ ಕಾಡಂಚಿನ ಜನರಿಗೆ ಅರಣ್ಯ ಇಲಾಖೆ ರಿಲೀಫ್ ನೀಡಿದೆ. ಕೇವಲ 40 ದಿನಗಳಲ್ಲಿ 22 ಹುಲಿಗಳನ್ನು ಸೆರೆ ಹಿಡಿದು, ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಇಲಾಖೆ ಹೊಸ ತಂತ್ರಜ್ಞಾನಗಳ ಬಳಕೆ ಜೊತೆಗೆ ಮುಖವಾಡಗಳನ್ನು ಸಹ ವಿತರಿಸಿತ್ತು. ಮೈಸೂರು, ಡಿಸೆಂಬರ್ 04: ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ವ್ಯಾಘ್ರನ ಅಟ್ಟಹಾಸಕ್ಕೆ ಮೈಸೂರು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಜನರು ಬೆಚ್ಚಿ ಬಿದ್ದಿದ್ದರು. ಮನೆಯಿಂದ ಹೊರ ಹೋಗಲೂ ಭಯಪಡಬೇಕಾದ ಸ್ಥಿತಿ ಎದುರಾಗಿತ್ತು. ಮಾನವ-ಕಾಡು ಪ್ರಾಣಿ ಸಂಘರ್ಷ ಹೆಚ್ಚಿದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ ಕೇವಲ 40 ದಿನಗಳ ಅವಧಿಯಲ್ಲಿ 22 ಹುಲಿಗಳನ್ನು ಸೆರೆ ಹಿಡಿದಿದೆ. ಆ ಮೂಲಕ ಗ್ರಾಮಗಳಲ್ಲಿನ ನಿವಾಸಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅರಣ್ಯ ಇಲಾಖೆ 22 ಹುಲಿಗಳನ್ನು ಸೆರೆ ಹಿಡಿದಿದ್ದು, ಆ ಪೈಕಿ ಮರಿ ಹುಲಿಗಳೇ ಹೆಚ್ಚಿವೆ. ಎಲ್ಲವೂ ಆರೋಗ್ಯವಾಗಿದ್ದು, ಇವುಗಳನ್ನು ಮೈಸೂರಿನ ಕೂರ್ಗಳ್ಳಿಯಲ್ಲಿರುವ ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಇವುಗಳನ್ನು ಕಾಡಿನಲ್ಲಿ ಸುರಕ್ಷಿತ ಸ್ಥಳಕ್ಕೆ ಬಿಡಬೇಕಾ? ಅಥವಾ ಪುನರ್ವಸತಿ ಕೇಂದ್ರದಲ್ಲೇ ಆರೈಕೆ ಮಾಡಬೇಕಾ? ಎನ್ನುವ ನಿರ್ಧಾರವನ್ನು ಅಧಿಕಾರಿಗಳು ಮಾಡಲಿದ್ದಾರೆ. ಹುಲಿಗಳ ದಾಳಿ ಪ್ರಕರಣಗಳು ಹೆಚ್ಚಿದ್ದ ಹಿನ್ನಲೆ ಅರಣ್ಯ ಇಲಾಖೆ ಹೊಸ ಯೋಜನೆ ರೂಪಿಸಿತ್ತು. ಸುಂದರ್‌ಬನ್ಸ್ ಮಾದರಿಯಂತೆ ರೈತರು ಮತ್ತು ದನಗಾಹಿಗಳಿಗೆ ಮುಖವಾಡಗಳನ್ನು ವಿತರಿಸಿತ್ತು. ಹುಲಿಗಳು ಹಿಂಬದಿಯಿಂದ ದಾಳಿ ಮಾಡುವುದನ್ನು ತಡೆಯಲು ಈ ಮುಖವಾಡಗಳು ಸಹಾಯಕವಾಗಲಿವೆ ಎಂದಿದ್ದ ಇಲಾಖೆ, ಸುಮಾರು 10,000 ಮುಖವಾಡಗಳನ್ನು ವಿವಿಧ ಗ್ರಾಮಗಳಲ್ಲಿ ವಿರಿಸಿತ್ತು. ಜೊತೆಗೆ ಕಾಡು ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಮಾಡಿತ್ತು. ಇದರ ನಡು ನಡುವೆಯೇ ಹುಲಿಗಳ ಸೆರೆಗೂ ಕಾರ್ಯಾಚರಣೆ ನಡೆದಿದ್ದು ಈವರೆಗೆ 22 ಹುಲಿಗಳನ್ನು ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ. ಸಫಾರಿ ಪುನರಾರಂಭಕ್ಕೆ ಒತ್ತಾಯ ಹುಲಿಗಳ ಸೆರೆಯಿಂದಾಗಿ ಕಾಡಂಚಿನ ಗ್ರಾಮಗಳ ಜನರು ಕೊಂಚ ನಿರಾಳರಾಗಿದ್ದಾರೆ. ಮತ್ತೊಂದೆಡೆ ಹುಲಿ ಸಮಸ್ಯೆಯಿಂದ ಬಂದ್ ಮಾಡಲಾಗಿದ್ದ ಕಾಡಿನ ಸಫಾರಿಯನ್ನು ಮತ್ತೆ ಆರಂಭಿಸಬೇಕೆಂದು ಮೈಸೂರು ಜಿಲ್ಲಾ ಸಂಘ ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಗಣನೀಯವಾಗಿ ಹೆಚ್ಚಾದ ಬೆನ್ನಲ್ಲೇ, ಹುಲಿ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ತುರ್ತು ಕ್ರಮಕ್ಕೆ ಮುಂದಾಗಿತ್ತು. ಸಿಬ್ಬಂದಿಯನ್ನು ಕೂಂಬಿಂಗ್‌ಗೆ ಬಳಸಿಕೊಳ್ಳುವ ಸಲುವಾಗಿ ಬಂಡೀಪುರ ಮತ್ತು ನಾಗರಹೊಳೆಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಮೈಸೂರಿನಲ್ಲಿ ಮುಂದುವರಿದ ಹುಲಿ ಸೆರೆ ಕಾರ್ಯಚರಣೆ: ಜಿಲ್ಲೆಯ ಹಲವು ಕಡೆ ಒಂದು ತಿಂಗಳಿನಲ್ಲಿ 25 ಹುಲಿಗಳ ರಕ್ಷಣೆ

ಮೈಸೂರಿನ ಹುಣಸೂರು ತಾಲೂಕಿನಲ್ಲಿ ಹುಲಿಗಳ ಹಾವಳಿಯಿಂದ ಜನರಲ್ಲಿ ಆತಂಕ ಮನೆಮಾಡಿದೆ. ನಾಗಮಂಗಲ, ಮುತ್ತುರಾಯನ ಹೊಸಹಳ್ಳಿ ಗ್ರಾಮಗಳಲ್ಲಿ ಹುಲಿಗಳು ಪ್ರತ್ಯಕ್ಷವಾಗಿವೆ. ಅರಣ್ಯ ಇಲಾಖೆ ಭೀಮ, ಏಕಲವ್ಯ, ವರಲಕ್ಷ್ಮೀ ಸಾಕಾನೆಗಳು ಮತ್ತು ಥರ್ಮಲ್ ಡ್ರೋನ್ ಬಳಸಿ ಹುಲಿ ಹಿಡಿಯಲು ಕಾರ್ಯಾಚರಣೆ ನಡೆಸಿದೆ. ಮೈಸೂರು ವಲಯದಲ್ಲಿ ಈ ಹಿಂದೆ 24 ಹುಲಿಗಳು ಮತ್ತು ಹಲವು ಆನೆಗಳನ್ನು ರಕ್ಷಿಸಲಾಗಿದೆ. ವನ್ಯಜೀವಿ ಸಂರಕ್ಷಣೆಗೆ ಸಿಬ್ಬಂದಿ ಹಾಗೂ ಮೂಲಸೌಕರ್ಯ ಅಗತ್ಯ. ಮೈಸೂರು, ಡಿ.11: ಮೈಸೂರಿನ (Mysore tiger rescue) ಹುಣಸೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಹುಲಿ ಹಾವಳಿಯಿಂದ ಜನರು ಭಯಗೊಂಡಿದ್ದಾರೆ. ಇದೀಗ ಈ ಹುಲಿಗಳ ಕಾರ್ಯಚರಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಮೈಸೂರು ಜಿಲ್ಲೆಯಲ್ಲಿ ಮತ್ತೆ ನಾಲ್ಕು ಹುಲಿಗಳು ಪ್ರತ್ಯಕ್ಷವಾಗಿದ್ದು, ನಾಗಮಂಗಲ ಗ್ರಾಮದ ಹೊರವಲಯದಲ್ಲಿ ಹಾಗೂ ಮುತ್ತುರಾಯನ ಹೊಸಹಳ್ಳಿ ಗ್ರಾಮದ ಬೆಟ್ಟದಲ್ಲಿ ಹುಲಿಗಳು ಕಂಡು ಬಂದಿದೆ. ಹುಲಿ ಕಂಡು ಭಯಭೀತರಾದ ಸುತ್ತಮುತ್ತಲಿನ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳ ಸಹಾಯದಿಂದ ಹುಲಿಯನ್ನು ಹಿಡಿಯಲು ಕಾರ್ಯಚರಣೆ ನಡೆಸಲಾಗಿದೆ. ಈ ಕಾರ್ಯಚರಣೆಗೆ ಭೀಮ, ಏಕಲವ್ಯ, ವರಲಕ್ಷ್ಮೀ ಸಾಕಾನೆಗಳನ್ನು ನಿಯೋಜನೆ ಮಾಡಲಾಗಿದೆ. ಇದರ ಜತೆಗೆ ಎರಡು ಥರ್ಮಲ್ ಡ್ರೋಣ್ ಕೂಡ ಬಳಸಲಾಗಿದೆ. ಇನ್ನು ಇಲ್ಲಿಯವರೆಗೆ ಅರಣ್ಯ ಅಧಿಕಾರಿಗಳು 25 ಹುಲಿಗಳ ಕಾರ್ಯಚರಣೆ ಮಾಡಿ, ರಕ್ಷಣೆ ಮಾಡಿದ್ದಾರೆ. ಮೈಸೂರಿನಲ್ಲಿ 25 ಹುಲಿಗಳು ರಕ್ಷಣೆ: ಅಕ್ಟೋಬರ್ 15 ರಿಂದ ಮೈಸೂರಿನ ಹಲವು ಭಾಗದಲ್ಲಿ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಐದು ವಯಸ್ಕ ಹುಲಿಗಳು ಮತ್ತು 19 ಮರಿಗಳು ಸೇರಿದಂತೆ 24 ಹುಲಿಗಳನ್ನು ರಕ್ಷಿಸಲಾಗಿದೆ. ಇನ್ನು ಈ ಹುಲಿಯ ದಾಳಿಯಿಂದ ಮೂರು ಜನ ಸಾವನ್ನಪ್ಪಿದ್ದಾರೆ. ಒಬ್ಬರು ಗಾಯಗೊಂಡಿದ್ದರು. ಇನ್ನು ಈ ಕಾರ್ಯಚರಣೆ ವೇಳೆ ಸಿಕ್ಕ ನಾಲ್ಕು ಮರಿಗಳನ್ನು ಬನ್ನೇರುಘಟ್ಟ ಕೇಂದ್ರದಲ್ಲಿ ಮತ್ತು ಎರಡು ವಯಸ್ಕ ಮರಿಗಳನ್ನು ಕೂರ್ಗಳ್ಳಿಯಲ್ಲಿ ಇರಿಸಲಾಗಿದೆ. ಉಳಿದ ಮರಿಗಳನ್ನು ಕಾಡಿಗೆ ಬಿಡಲಾಗಿದೆ. ವಿವಿಧ ಕಡೆ ಆನೆಗಳ ರಕ್ಷಣೆ: ಹುಣಸೂರು ವನ್ಯಜೀವಿ ವಿಭಾಗದ ಹುಣಸೂರು ತಾಲ್ಲೂಕಿನಲ್ಲಿ ಒಂದು ವಯಸ್ಕ ಆನೆ ಮತ್ತು ಐದು ಮರಿ ಆನೆಗಳನ್ನು ರಕ್ಷಣೆ ಮಾಡಲಾಗಿದೆ. ನಾಗರಹೊಳೆ ಹುಲಿ ಅಭಯಾರಣ್ಯದ ಹುಣಸೂರು ತಾಲ್ಲೂಕಿನಲ್ಲಿ ಒಂದು ಮರಿ ಆನೆಯ ರಕ್ಷಣೆ ಮಾಡಲಾಗಿದೆ. ಬಿಆರ್‌ಟಿಯಲ್ಲಿ ಮೂರು ಮರಿ ಆನೆ, ಬಂಡೀಪುರ ವ್ಯಾಪ್ತಿಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂದು ವಯಸ್ಕ ಆನೆ ಮತ್ತು ಮೂರು ಮರಿ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿ ಮೂರು ವಯಸ್ಕ ಆನೆ ಮತ್ತು ಏಳು ಮರಿಗಳನ್ನು ರಕ್ಷಿಸಲಾಗಿದೆ. ಇನ್ನು ಈ ಬಗ್ಗೆ ಮೈಸೂರು ಪ್ರಾದೇಶಿಕ ವಿಭಾಗದ ಡಿಸಿಎಫ್, ಕೆ. ಪರಮೇಶ ಅವರು ಮಾಹಿತಿ ನೀಡಿದ್ದಾರೆ. ಅನಾಥ, ವಯಸ್ಸಾದ, ಗಾಯಗೊಂಡ ಹುಲಿ ಮರಿಗಳನ್ನು ರಕ್ಷಣೆ ಮಾಡಲು ಕೆಲವೊಂದು ನಿಯಮಗಳನ್ನು ಮಾಡಲಾಗಿದೆ. ಆ ಮಾರ್ಗಸೂಚಿಯಂತೆ ಹುಲಿಗಳು ಹಾಗೂ ಆನೆಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಹುಲಿ ಮರಿಗಳಿಗೆ ಎರಡು ವರ್ಷ ತುಂಬುವವರೆಗೆ ಬೇಟೆಯಾಡಲು ಮತ್ತು ಸ್ವಂತವಾಗಿ ಬದುಕಲು ಹಲ್ಲು ಇರುವುದಿಲ್ಲ. ಹಾಗಾಗಿ ಅವುಗಳ ಮೇಲೆ ಬೇರೆ ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ, ಅವುಗಳನ್ನು ರಕ್ಷಿಸಬೇಕು ಎಂದು ಕೆ. ಪರಮೇಶ ಹೇಳಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ: ಗೋವಾ ದುರಂತ ಬೆನ್ನಲ್ಲೇ ಬೆಂಗಳೂರಿನ ಪಬ್, ಹೋಟೆಲ್, ರೆಸ್ಟೋರೆಂಟ್ಗಳಿಗೆ ಸ್ಟ್ರಿಕ್ಟ್ ರೂಲ್ಸ್ ಇನ್ನು ಈ ಹುಲಿಗಳು ಅಥವಾ ಆನೆಗಳನ್ನು ಪಳಗಿಸಲು ಹೊಸ ಮೂಸೌಕರ್ಯಗಳು ಹಾಗೂ ತರಬೇತಿ ಪಡೆದ ಸಿಬ್ಬಂದಿಗಳು ಬೇಕು. ಅದಕ್ಕಾಗಿ ಸಿಬ್ಬಂದಿಗಳಿಗೆ ವಿಶೇಷ ತರಬೇತಿಗಳನ್ನು ನೀಡಲಾಗುತ್ತದೆ. ಅವುಗಳನ್ನು ಸಾಕುವುದು ಒಂದು ದೊಡ್ಡ ಸವಾಲು ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹೇಳಿದ್ದಾರೆ. ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳಲ್ಲಿ ಹೆಚ್ಚಿನ ಹೂಡಿಕೆಯ ಅಗತ್ಯ ಎಂದಿದ್ದಾರೆ. ಇನ್ನು ಕೆರ್ತಿ, ಉರ್ತಿ, ಬಿಸ್ಲೆ, ಮೂರ್ಕನಗುಡ್ಡ ಮತ್ತು ಇತರ ಮೀಸಲು ಅರಣ್ಯಗಳನ್ನು ಸಂರಕ್ಷಿತ ಪ್ರದೇಶಗಳಾಗಿ ಘೋಷಿಸುವುದು, ಚಿಕ್ಕನಹಳ್ಳಿ ರಾಜ್ಯ ಅರಣ್ಯ ಮತ್ತು ಯೆಲ್ವಾಲ್ ಮೀಸಲು ಅರಣ್ಯದಂತಹ ಸ್ಥಳಗಳಲ್ಲಿ ಹೊಸ ರಕ್ಷಣಾ ಕೇಂದ್ರಗಳನ್ನು ಸ್ಥಾಪಿಸುವ ಯೋಚನೆ ಇದೆ ಎಂದು ಹೇಳಿದ್ದಾರೆ. ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Koppal: ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಅಣಿಯಾದ ಅಂಜನಾದ್ರಿ; ಸಿದ್ಧತೆ ಹೇಗಿದೆ?

ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ನಾಳೆ ನಡೆಯಲಿರುವ ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ದೇಗುಲಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ನವ ನದಿ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಪವನ ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರ ಅನುಕೂಲಕ್ಕೆ ಕುಡಿಯುವ ನೀರು, ಊಟ, ವೈದ್ಯಕೀಯ ಸೇವೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕೊಪ್ಪಳ, ಡಿಸೆಂಬರ್ 02: ನಾಳೆ ನಡೆಯಲಿರುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಹನುಮದ್ ವ್ರತ ಆಚರಣೆ ಮಾಡಿದ ಹನುಮನ ಭಕ್ತರು ಅಂಜನಾದ್ರಿ ಬೆಟ್ಟದ 575 ಮೆಟ್ಟಿಲೇರಿ ಮಾಲೆಯನ್ನ ವಿಸರ್ಜನೆ ಮಾಡಲಿದ್ದಾರೆ. ಈ ಹಿನ್ನಲೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ವರ್ಷ ಚಾತುರ್ಮಾಸದಲ್ಲಿ ಹನುಮ ಭಕ್ತರು ಮಾಲೆ ಧಾರಣೆ ಮಾಡಿ, ವ್ರತ ಕೈಗೊಳ್ಳುತ್ತಾರೆ. ವ್ರತದ ಕೊನೆ ದಿನ ಅಂದರೆ ಈ ವರ್ಷ ಡಿ.3ರಂದು ಮಾಲಾಧಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ, ಮಾಲೆ ವಿಸರ್ಜನೆ ಮಾಡುತ್ತಾರೆ. ಈ ಚಾತುರ್ಮಾಸದಲ್ಲೇ ರಾಮ ಹಾಗೂ ಹನುಮಂತ ತಪ್ಪಸ್ಸು ಮಾಡಿದ್ದರು ಎಂಬ ನಂಬಿಕೆ ಭಕ್ತರಲ್ಲಿ ಇದೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಹನುಮ ಮಾಲೆ ಧರಿಸಿ ವ್ರತ ಕೈಗೊಂಡಿರುವ ಲಕ್ಷಾಂತರ ಭಕ್ತರು, ಈಗಾಗಲೇ ಅಂಜನಾದ್ರಿಯ ಕಡೆ ಮುಖ ಮಾಡಿದ್ದಾರೆ. ಇಂದು ಸಂಜೆ ವೇಳೆಗೆ ಬಹುತೇಕ ಮಾಲಾಧಾರಿಗಳು ಗಂಗಾವತಿ, ಹುಲಿಗಿ ತಲುಪಲಿದ್ದಾರೆ. ಇದನ್ನೂ ಓದಿ: ಅಂಜನಾದ್ರಿಯಲ್ಲಿ ಹನುಮ ಮಾಲೆ ವಿಸರ್ಜನೆಗೂ ಕಾರ್ಖಾನೆಗಳ ಸಹಯೋಗ? ಭುಗಿಲೆದ್ದ ಆಕ್ರೋಶ ಧಾರ್ಮಿಕ ಕಾರ್ಯಕ್ರಮ ಹನುಮನ ಜನ್ಮಸ್ಥಳ ಎಂದು ನಂಬಲಾಗುವ ಅಂಜನಾದ್ರಿ ಬೆಟ್ಟದ ಮೇಲಿನ ದೇವಸ್ಥಾನದಲ್ಲಿನ ಹನುಮಂತನ ಮೂರ್ತಿಗೆ ನಾಳೆ (ಡಿ.3) ನವ ನದಿಗಳ ನೀರಿನ ಜಲಾಭಿಷೇಕ ನಡೆಯಲಿದೆ. ಜೊತೆಗೆ ಮೂರ್ತಿಗೆ ಪಂಚಾಮೃತ ಅಭಿಷೇಕ, ಸಹಸ್ರನಾಮ ಪಠಣ, ಕುಂಕುಮಾರ್ಚನೆ, ಮಹಾಮಂಗಳಾರತಿ, ಪವನ ಹೋಮ, ಶ್ರೀರಾಮನಾಮ ಪಠಣ, ಭಕ್ತರಿಂದ ಹನುಮಮಾಲೆ ವಿಸರ್ಜನೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಭಕ್ತರ ಅನುಕೂಲಕ್ಕಾಗಿ ಸಹಾಯವಾಣಿ ಅಂಜನಾದ್ರಿಗೆ ಭಕ್ತರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳು 14 ಸಮಿತಿ ರಚಿಸಿ, ಅಧಿಕಾರಿಗಳಿಗೆ ಅದರ ನಿರ್ವಹಣೆಯ ಜವಾಬ್ದಾರಿ ನೀಡಿದ್ದಾರೆ. ರಸ್ತೆ ಮತ್ತು ಪಾರ್ಕಿಂಗ್ ಸ್ಥಳಗಳ ಸ್ವಚ್ಛತೆ, ಪಾದಚಾರಿ ಮಾರ್ಗದ ನಿರ್ಮಾಣ, ಭಕ್ತರಿಗೆ ಕುಡಿಯುವ ಮತ್ತು ಸ್ನಾನದ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ನೂರಾರು ನೀರಿನ ಟ್ಯಾಪ್ ಅಳವಡಿಸಲಾಗಿದೆ. ಪ್ರಸಾದ ವಿತರಣೆ ವ್ಯವಸ್ಥೆಯೂ ಇದೆ. ಉಪಹಾರ, ಊಟದ ಜೊತೆಗೆ ಪ್ರಾಥಮಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕೆ ಸಹಾಯವಾಣಿ ಕೂಡ ತೆರೆಯಲಾಗಿದೆ. 20 ಕಡೆ ಪಾರ್ಕಿಂಗ್ ವ್ಯವಸ್ಥೆ ಸುಗಮ ಸಂಚಾರಕ್ಕೆ ಸುಮಾರು 20 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆನೆಗೊಂದಿ, ಉತ್ಸವ ಬಯಲು, ಚಿಕ್ಕರಾಂಪೂರ, ಕಡೆಬಾಗಿಲು, ಹನುಮನಹಳ್ಳಿ, ಆನೆಗೊಂದಿ ಗ್ರಾಮದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಬಾಗಲಕೋಟೆ, ಹುಬ್ಬಳ್ಳಿ, ಗದಗ, ಕೊಪ್ಪಳ, ಬೆಳಗಾವಿ ಭಾಗಗಳಿಂದ ಬೂದಗುಂಪ ಸರ್ಕಲ್, ಕೊಪ್ಪಳ ಮಾರ್ಗವಾಗಿ ಬರುವ ಮಾಲಾಧಾರಿಗಳು ಹಿಟ್ನಾಳ ಗ್ರಾಮದ ಮಾರ್ಗವಾಗಿ ಆಗಮಿಸಿ ಹನುಮನಹಳ್ಳಿ, ಸಣಾಪೂರ, ಕಲ್ಲಿನ ಸೇತುವೆ ಬಳಿಯ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಬೇಕು. ಇನ್ನೂ ಕಮಲಾಪೂರ, ಬುಕ್ಕಸಾಗರ, ಕಡೆಬಾಗಿಲು ಮಾರ್ಗವಾಗಿ ಹಾಗೂ ಕುಲಬುರಗಿ, ಯಾದಗಿರಿ, ರಾಯಚೂರು, ಸಿಂಧನೂರ, ಮಸ್ಕಿ, ಕನಕಗಿರಿ, ಗಂಗಾವತಿ ಮಾರ್ಗವಾಗಿ ಬರುವ ಮಾಲಾಧಾರಿಗಳಿಗೆ ಆನೆಗೊಂದಿ, ಕಡೆಬಾಗಿಲು, ಚಿಕ್ಕರಾಂಪೂರ ಗ್ರಾಮಗಳಲ್ಲಿ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಇರಲಿದೆ. ಶೋಭಾಯಾತ್ರೆ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆ ಹಿಂದೂಪರ ಸಂಘಟನೆಗಳಿಂದ ಗಂಗಾವತಿಯಲ್ಲಿ ಶೋಭಾಯಾತ್ರೆ ಹಾಗೂ ಬಹಿರಂಗ ಸಭೆ ಆಯೋಜಿಸಲಾಗಿದೆ. ನಾಳೆ ಬೆಳಗ್ಗೆ ಎಪಿಎಂಸಿ ಆವರಣದಿಂದ ಆರಂಭವಾಗಲಿರುವ ಶೋಭಾಯಾತ್ರೆ, ಗಂಗಾವತಿಯ ಪ್ರಮುಖ ರಸ್ತೆಯಲ್ಲಿ ಸಾಗಲಿದೆ. ಬಳಿಕ ಬಾಬು ಜಗಜೀವನರಾವ್ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ. ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಮದುವೆಗೂ ಮುನ್ನ ಮಸಣ ಸೇರಿದ ಜೋಡಿ: ಅಪಘಾತಕ್ಕೂ ಮೊದಲು ನಡೆದಿತ್ತು ಫೋಟೋ ಶೂಟ್

ಭೀಕರ ಅಪಘಾತದಲ್ಲಿ ಹಸೆಮಣೆ ಏರಬೇಕಿದ್ದ ಜೋಡಿಯೊಂದು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸುಕೊಂಡು ಬರುವ ವೇಳೆ ನಡೆದ ಬೈಕ್ ಅಪಘಾತದಲ್ಲಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣಬಿಟ್ಟಿದ್ದಾನೆ. ಹೀಗಾಗಿ ಮದುವೆ ಸಂಭ್ರಮದಲ್ಲಿದ್ದ ಮನೆಗೆ ಭರಸಿಡಿಲು ಬಡಿದಂತಾಗಿದೆ. ಅವರಿಬ್ಬರೂ ಬದುಕಿನ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದರು. ಜೊತೆಯಾಗಿ ಸಂತೋಷದಿಂದ ಬದುಕಿ ಬಾಳಬೇಕೆಂದು ಅಂದುಕೊಂಡಿದ್ದ ಅವರು, ಇನ್ನೊಂದು 12 ದಿನಗಳು ಕಳೆದರೆ ಸಪ್ತಪದಿಯನ್ನೂ ತುಳಿಯುತ್ತಿದ್ದರು. ಆದರೆ ಅಷ್ಟರಲ್ಲಾಗಲೇ ವಿಧಿ ಅವರ ಬಾಳಲ್ಲಿ ಚೆಲ್ಲಾಟ ಆಡಿದೆ. ಹಸೆಮಣೆ ಏರಬೇಕಿದ್ದ ಜೋಡಿ ಒಟ್ಟಿಗೆ ಪ್ರಾಣ ಬಿಟ್ಟಿದೆ.
ಮತ್ತೆ ಮುನ್ನಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ: ಹೋರಾಟಕ್ಕಿಳಿದ ರೈತರು

ಬಲ್ಡೋಟಾ ಕಾರ್ಖಾನೆ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಕಾರ್ಖಾನೆ ಬೇಕೇಬೇಕೆಂದು ಕೊಪ್ಪಳ ಜಿಲ್ಲಾಡಳಿತ ಕಚೇರಿ ಮುಂದೆ ರೈತರು ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಬಲ್ಡೋಟಾ ಕಾರ್ಖಾನೆ ಕುರಿತಾಗಿ ಕೊಪ್ಪಳದಲ್ಲಿ ಪರ-ವಿರೋಧ ಹೋರಾಟ ಶುರುವಾಗಿದೆ. ಸದ್ಯ ಈ ಹೋರಾಟ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಕೊಪ್ಪಳ, ಡಿಸೆಂಬರ್ 05: ಕಳೆದ ವರ್ಷ ಬಲ್ಡೋಟಾ ಕಾರ್ಖಾನೆಯನ್ನ (baldota steel factory) ವಿರೋಧಿಸಿ ಗವಿ ಮಠದ ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಹೋರಾಟಕ್ಕೆ ಇಳಿದಿದ್ದರು. ಅಷ್ಟೇ ಅಲ್ಲದೆ ಕಣ್ಣೀರು ಕೂಡ ಹಾಕಿದ್ದರು. ಆ ಸಮಯದಲ್ಲಿ ಸಿಎಂ ಸೂಚನೆ ಮೇರೆಗೆ ಕಾರ್ಖಾನೆಯ ಕೆಲಸ ಕೆಲಕಾಲ ಸ್ಥಗಿತವಾಗಿತ್ತು. ದಿನ ಕಳೆದಂತೆ ಎಂದಿನಂತೆ ಕಾರ್ಖಾನೆಯ ಕೆಲಸ ಆರಂಭವಾಗಿತ್ತು. ಕುಡಿಯುವ ನೀರಿನ ವಿಚಾರವಾಗಿ ಕಾರ್ಖಾನೆ ಹಾಗೂ ಕುರಿಗಾಹಿಗಳ ನಡುವೆ ದೊಡ್ಡ ಗಲಾಟೆಯಾಗಿತ್ತು. ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕಳೆದ 36 ದಿನಗಳಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹೋರಾಟ ಮಾಡುತ್ತಿದೆ. ಇದೆಲ್ಲದರ ನಡುವೆ ಇಂದು ಕಾರ್ಖಾನೆ ಬೇಕೆಂದು ಹೋರಾಟ (Protest) ಆರಂಭವಾಗಿದೆ. ಕಾರ್ಖಾನೆ ಪರವಾಗಿ ರೈತರು ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಬಲ್ಡೋಟಾ ಸ್ಟೀಲ್ ಆ್ಯಂಡ್ ಪವರ್ ಲಿಮಿಟಿಡ್, ಕೊಪ್ಪಳ ತಾಲೂಕಿನ ಬಸಾಪೂರ ಬಳಿ ವಿಸ್ತರಣೆಯಾಗಿರುವ ಕಾರ್ಖಾನೆ. ಸುಮಾರು 54 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆಯಾಗಿದೆ. ಈ ಕಾರ್ಖಾನೆ ಆರಂಭದ ದಿನದಿಂದ ವಿವಾದ ಶುರುವಾಗಿದೆ. ಕೊಪ್ಪಳ ಜಿಲ್ಲೆಯ ಜನ ಕಾರ್ಖಾನೆ ವಿರೋಧಿಸಿ ಬೃಹತ್ ಪ್ರತಿಭಟನೆ ಮಾಡಿದ್ರು. ಕೊಪ್ಪಳ ಬಂದ್ ಮಾಡಿ ಹೋರಾಟ ಮಾಡಿದ್ರು. ಹೋರಾಟದಲ್ಲಿ ಕೊಪ್ಪಳದ ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಕೂಡಾ ಭಾಗಿಯಾಗಿದ್ರು. ಇದೀಗ ಈ ಕಾರ್ಖಾನೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಕಾರ್ಖಾನೆ ಪರವಾಗಿ ರೈತರಿಂದ ಧರಣಿ ಬಲ್ಡೋಟಾ ಕಾರ್ಖಾನೆಗೆ ಭೂಮಿ ಕಳೆದುಕೊಂಡವರು ಕಾರ್ಖಾನೆ ಬೇಕು ಅಂತಾ ಹೋರಾಟಕ್ಕೆ ಇಳಿದಿದ್ದಾರೆ. ಇಂದಿನಿಂದ ಕೊಪ್ಪಳ ಡಿಸಿ ಆಫೀಸ್ ಮುಂದೆ ಬಲ್ಡೋಟಾ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡವರಿಂದ ಅನಿರ್ದಿಷ್ಟಾವಧಿ ಧರಣಿಗೆ ಚಾಲನೆ ನೀಡಲಾಗಿದೆ. 18 ವರ್ಷಗಳಿಂದ ಸುಮಾರು 300ಕ್ಕೂ ಅಧಿಕ ರೈತರು ಕೆಐಡಿಬಿಗೆ ಜಮೀನು ನೀಡಿದ್ದಾರೆ. ಇದೀಗ ಆ ರೈತರು ನಮಗೆ ಕಾರ್ಖಾನೆ ಸ್ಥಾಪಿಸಿ ಕೆಲಸ ಕೊಡಿ, ಇಲ್ಲವೇ ಸರ್ಕಾರಿ ನೌಕರಿ ಕೊಡಿ ಎಂದು ಹೋರಾಟಕ್ಕೆ ಧುಮುಕಿದ್ದಾರೆ. ಭೂಮಿ ಕಳೆದುಕೊಂಡ ಕೊಪ್ಪಳ ತಾಲೂಕಿನ ಹಾಲುವರ್ತಿ, ಬಸಾಪೂರ ಭಾಗದ ರೈತರು ಕಾರ್ಖಾನೆ ಬೇಕೇಬೇಕು ಎನ್ನುತ್ತಿದ್ದಾರೆ. ಇದನ್ನೂ ಓದಿ: ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಿರೋಧಕ್ಕೆ ಸೆಡ್ಡು: ಬಲ್ಡೋಟಾ ಕಂಪನಿಗಾಗಿ ಪ್ರತಿಭಟನೆ ಇನ್ನು ಈಗಾಗಲೇ ಬಲ್ಡೋಟಾ ಕಾರ್ಖಾನೆ ವಿಚಾರವಾಗಿ ಕೊಪ್ಪಳದಲ್ಲಿ ಪರ ವಿರೋಧ ಹೋರಾಟಗಳು ನಡೆಯುತ್ತಿವೆ. ಬಲ್ಡೋಟಾ, ಕಿರ್ಲೋಸ್ಕರ್, ಮುಕುಂದ ಸುಮಿ ಸೇರಿ ಯಾವ ಕಾರ್ಖಾನೆ ವಿಸ್ತರಣೆಯಾಗಬಾರದೆಂದು ಕೊಪ್ಪಳದಲ್ಲಿ ಕಳೆದ 36 ದಿನಗಳಿಂದ ಹೋರಾಟ ನಡೆಯುತ್ತಿದೆ. ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಕೊಪ್ಪಳ ನಗರಸಭೆ ಮುಂಭಾಗ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ನಾಡಿನ ಸ್ವಾಮೀಜಿಗಳು, ಸಿನಿಮಾ ನಟರು ಭಾಗಿಯಾಗಿದ್ದರು. ಇಂದು ಇದೇ ಹೋರಾಟಕ್ಕೆ ರಾಜ್ಯ ರೈತ ಸಂಘ ಬೆಂಬಲ ನೀಡಿದೆ. ಇಂದು ಬಲ್ಡೋಟಾ ಕಾರ್ಖಾನೆ ವಿರೋಧಿಸಿ ರಾಜ್ಯ ರೈತ ಸಂಘ ಕೊಪ್ಪಳದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಕೊಪ್ಪಳ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ಮಾಡಿ ಬಲ್ಡೋಟಾ ವಿಸ್ತರಣೆಯನ್ನ ವಿರೊಧಿಸಿದರು. ಪ್ರತಿಭಟನೆಯಲ್ಲಿ ಮಹಿಳಾ ರೈತ ಮುಖಂಡರು ಭಾಗಿಯಾಗಿದ್ದರು. ಬಲ್ಡೋಟಾ ಕಂಪನಿ ತೊಲಗಬೇಕೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ಮುಂಭಾಗದಿಂದ ಅಶೋಕ ವೃತ್ತದವರೆಗೂ ರ್ಯಾಲಿ ಮಾಡಿ ಸರ್ಕಾರದ ವಿರುದ್ದ ರೈತ ಸಂಘದ ಮುಖಂಡರು ಆಕ್ರೋಶ ಹೊರಹಾಕಿದರು. ಇದೆಲ್ಲದರ ನಡುವೆ ಇದೀಗ ಕೊಪ್ಪಳದಲ್ಲಿ ಕಾರ್ಖಾನೆ ಬೇಕೇಬೇಕು ಎಂದು ಮತ್ತೊಂದು ಹೊಸ ವರಸೆ ಆರಂಭವಾಗಿದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್ ಕಾರ್ಖಾನೆ ಸ್ಥಾಪನೆ ವಿರೋಧಿ ಹೋರಾಟಕ್ಕೆ ಗವಿಮಠದ ಸ್ವಾಮೀಜಿ ಬೆಂಬಲ ಒಟ್ಟಾರೆ ಕೊಪ್ಪಳದಲ್ಲಿ ಬಲ್ಡೋಟಾ ಪರ ಹೋರಾಟ ಆರಂಭವಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹೋರಾಟ ನಡೆಸುತ್ತಿದ್ದರೆ, ಇತ್ತ ಕಾರ್ಖಾನೆ ಪರವಾಗಿ ರೈತರು ಹೋರಾಟಕ್ಕೆ ಇಳಿದಿದ್ದಾರೆ. ಇದು ಸದ್ಯ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಪರ-ವಿರುದ್ಧ ಹೋರಾಟ ಯಾವ ರೀತಿ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕಾಗಿದೆ. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋದ ಜೋಡಿ ಭೀಕರ ಅಪಘಾತದಲ್ಲಿ ದುರ್ಮರಣ! ಹಸೆಮಣೆ ಏರಬೇಕಿದ್ದವರ ದಾರುಣ ಅಂತ್ಯ

ಮದುವೆಗೆ ಎರಡು ವಾರ ಬಾಕಿ ಇದ್ದಾಗ ಪ್ರೀ ವೆಡ್ಡಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಜೋಡಿ ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕೊಪ್ಪಳದಲ್ಲಿ ನಡೆದಿದೆ. ಮಂಡ್ಯ ಹಾಗೂ ಚಿಕ್ಕಮಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತಗಳೂ ಸೇರಿದಂತೆ ಭಾನುವಾರ ಕರ್ನಾಟಕದಲ್ಲಿ ಪ್ರತ್ಯೇಕ ಆ್ಯಕ್ಸಿಡೆಂಟ್ಗಳಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ. ಕೊಪ್ಪಳ, ಡಿಸೆಂಬರ್ 8: ಮದುವೆಗೆ ಎರಡು ವಾರ ಮಾತ್ರ ಬಾಕಿ ಉಳಿದಿತ್ತು. ಹೀಗಾಗಿ ಮದುವೆ ಸಿದ್ಧತೆಯಲ್ಲಿ ತೊಡಗಿದ್ದ ಜೋಡಿ, ಭಾನುವಾರ ಖುಷಿ ಖುಷಿಯಾಗಿ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಂಡಿತ್ತು. ಹೀಗೆ ಶೂಟ್ ಮುಗಿಸಿ ಮನೆಗೆ ವಾಪಸ್ ಆಗುವಾಗ ಭೀಕರ ಅಪಘಾತ ಸಂಭವಿಸಿದೆ. ಕೊಪ್ಪಳ (Koppal) ತಾಲೂಕಿನ ಗಂಗಾವತಿ ಬಳಿ ಬೈಕ್‌ಗೆ ಲಾರಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕರಿಯಪ್ಪ ಮಡಿವಾಳ (26) ಬಾಗೂ ಕವಿತಾ ಪವಾಡೆಪ್ಪ ಮಡಿವಾಳ (19) ಮೃತಪಟ್ಟಿದ್ದಾರೆ. ಕವಿತಾ ಹಾಗೂ ಕರಿಯಪ್ಪಗೆ ವಿವಾಹ ನಿಶ್ಚವಾಗಿದ್ದು, ಡಿಸೆಂಬರ್ 21 ಮದುವೆ ನಿಗದಿ ಆಗಿತ್ತು. ಹೀಗಾಗಿ ಭಾನುವಾರ ಇಬ್ಬರೂ ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋಗಿದ್ದರು. ಗಂಗಾವತಿ ತಾಲೂಕಿನ ಬೆಣಕಲ್ ಬಳಿ ಗುಡ್ಡ ಪ್ರದೇಶದಲ್ಲಿ ಶೂಟಿಂಗ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ, ಬೆಣಕಲ್ ಬಳಿಯೇ ಇವರ ಬೈಕ್ ಲಾರಿಗೆ ಡಿಕ್ಕಿಯಾಗಿದೆ. ಮದುವೆ ಆಗಬೇಕಿದ್ದ ಈ ಜೋಡಿ ಸ್ಥಳದಲ್ಲೇ ಮಸಣ ಸೇರಿದೆ. ಗಂಗಾವತಿ ಆಸ್ಪತ್ರೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕಾರು-ಬೈಕ್ ಡಿಕ್ಕಿ: ಬಾಲಕಿ ಸಾವು, ತಂದೆ-ತಾಯಿ ಸ್ಥಿತಿ ಗಂಭೀರ ಚಿಕ್ಕಮಗಳೂರು ತಾಲೂಕಿನ ಕಟ್ಟೆ ತಿಮ್ಮನಹಳ್ಳಿ ಕ್ರಾಸ್ ಬಳಿ ದಂಪತಿ, ಮಕ್ಕಳು ತೆರಳುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಆಗಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಓರ್ವ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ, ತಾಯಿ ಮತ್ತು ಸಹೋದರಿಯ ಸ್ಥಿತಿ ಗಂಭೀರವಾಗಿದೆ. ಮತ್ತೊಂದೆಡೆ, ಗದಗ ತಾಲೂಕಿನ ಹರ್ತಿ ಗ್ರಾಮದ ಬಳಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಉಸಿರುಚೆಲ್ಲಿದ್ದಾರೆ. ಮದುವೆ ಆಮಂತ್ರಣ ನೀಡಿ ವಾಪಸ್ ಬರುತ್ತಿದ್ದ ಬಸವರಾಜ್ ಕಮ್ಮಾರ ಹಾಗೂ ಪ್ರಶಾಂತ ಬಡಿಗೇರ್ ಅಪಘಾತಕ್ಕೆ ಬಲಿ ಆಗಿದ್ದಾರೆ. ಹಾಲಿನ ಟ್ಯಾಂಕರ್‌ಗೆ ಡಿಕ್ಕಿಯಾಗಿ ಕಾರು ಧಗಧಗ! ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಚಲಿಸುತ್ತಿದ್ದ ಹಾಲಿನ ಟ್ಯಾಂಕರ್‌ಗೆ ಹಿಂದಿನಿಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಕಾರ್‌ನಲ್ಲಿದ್ದವರು ಬಚಾವ್ ಆಗಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತಿಹಳ್ಳಿ ಬಳಿ ಕಾರು ಅಪಘಾತದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರೇಗೌಡ ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಮಂಡ್ಯ: ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಕಾರು; ಮೂವರು ದುರ್ಮರಣ ಹೀಗೆ ಭಾನುವಾರ ಕರ್ನಾಟಕದ ವಿವಿಧೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಭಾರಿ ಚಿನ್ನದ ನಿಕ್ಷೇಪ ಪತ್ತೆ! ಉತ್ಖನನಕ್ಕೊಪ್ಪದ ಅರಣ್ಯ ಇಲಾಖೆ

ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಅತಿದೊಡ್ಡ ಚಿನ್ನ ಮತ್ತು ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ. ಆದರೆ ಈ ಪ್ರದೇಶಗಳು ಸಂರಕ್ಷಿತ ಅರಣ್ಯಗಳ ಅಡಿಯಲ್ಲಿ ಬರುವುದರಿಂದ ಗಣಿಗಾರಿಕೆ ಮತ್ತು ಶೋಧನೆ ಸ್ಥಗಿತಗೊಂಡಿದೆ. ರಾಜ್ಯದ 65 ಸ್ಥಳಗಳಲ್ಲಿ ಪ್ಲಾಟಿನಂ, ತಾಮ್ರ ಸೇರಿದಂತೆ ಹಲವು ಅಪರೂಪದ ಖನಿಜಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅನುಮತಿಗಾಗಿ ಭೂವಿಜ್ಞಾನ ಇಲಾಖೆ ಕಾಯುತ್ತಿದೆ. ಬೆಂಗಳೂರು, ಡಿಸೆಂಬರ್ 09: ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಚಿನ್ನ ಮತ್ತು ಇತರ ಅಪರೂಪದ ಖನಿಜಗಳ ಅಧ್ಯಯನ ಮತ್ತು ಶೋಧನೆ ನಡೆಯುತ್ತಿರುವ 65 ಸ್ಥಳಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕೊಪ್ಪಳ (Koppal) ಮತ್ತು ರಾಯಚೂರಿನಲ್ಲಿ (Raichur) ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಮತ್ತು ಲಿಥಿಯಂ ಕಂಡುಬಂದಿದೆ ಎಂದು ಹೇಳಲಾಗಿದೆ. ಆದರೆ ಈ ಪ್ರದೇಶಗಳು ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಖನಿಜಗಳ ಉತ್ಖನನ ಮತ್ತು ವಿವರವಾದ ಸಂಶೋಧನೆ ಸ್ಥಗಿತಗೊಂಡಿದೆ. ರಾಜ್ಯದ 65 ಸ್ಥಳಗಳಲ್ಲಿ ಸಿಕ್ಕ ಖನಿಜ ಸಂಪತ್ತು ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯು 57 ಸ್ಥಳಗಳಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಎಂಟು ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಗಣಿಗಾರಿಕೆಗಾಗಿ ಅನ್ವೇಷಿಸಲಾಗುತ್ತಿರುವ ಖನಿಜಗಳಲ್ಲಿ ಪ್ಲಾಟಿನಂ ಗುಂಪಿನ ಲೋಹಗಳು, ಬಾಕ್ಸೈಟ್, ತಾಮ್ರ, ಕೋಬಾಲ್ಟ್, ನಿಕಲ್, ಸಿಲ್ಲಿಮನೈಟ್, ಟಂಗ್ಸ್ಟನ್, ವೆನಡಿಯಮ್, ಯುರೇನಿಯಂ, ವಜ್ರ, ಕೊಲಂಬೈಟ್-ಟ್ಯಾಂಟಲೈಟ್, ಮ್ಯಾಂಗನೀಸ್, ಕ್ರೋಮೈಟ್ ಮತ್ತು ಕಯಾನೈಟ್ ಮತ್ತು ಕ್ಸೆನೋಟೈಮ್ ಸೇರಿದಂತೆ ಅಪರೂಪದ ಖನಿಜ ಸಂಪತ್ತು ಸೇರಿದೆ. “ಅಪರೂಪಕ್ಕೆ ಮತ್ತು ಮೊಟ್ಟ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯ ಅಮ್ರಾಪುರ ಬ್ಲಾಕ್‌ನಲ್ಲಿ ನಾವು ಪ್ರತಿ ಟನ್‌ಗೆ 12-14 ಗ್ರಾಂ ಚಿನ್ನವನ್ನು ಶೋಧಿಸಿದ್ದೇವೆ. ಸಾಮಾನ್ಯವಾಗಿ ಅಧ್ಯಯನ ಮತ್ತು ಗಣಿಗಾರಿಕೆಯ ಸಮಯದಲ್ಲಿ ಪ್ರತಿ ಟನ್‌ಗೆ ಸುಮಾರು 2-3 ಗ್ರಾಂ ಚಿನ್ನ ಸಿಗುತ್ತದೆ. ಹಟ್ಟಿ ಚಿನ್ನದ ಗಣಿಗಳಲ್ಲಿ ಸುಮಾರು 2-2.5 ಗ್ರಾಂ ಚಿನ್ನ ಸಿಗಬಹುದು. ಆದರೆ ಕೊಪ್ಪಳದಲ್ಲಿರುವ ಈ ಸ್ಥಳವು ಸಂರಕ್ಷಿತ ಅರಣ್ಯದ ನಡುವೆ ಇರುವುದರಿಂದ ನಾವು ಅರಣ್ಯ ತೆರವಿಗೆ ಅರ್ಜಿ ಸಲ್ಲಿಸಿದ್ದೇವೆ ”ಎಂದು ಇಲಾಖೆಯ ಮೂಲಗಳು ತಿಳಿಸಿದ್ದನ್ನು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಕಣಿವೆಯ ನಂತರ ದೇಶದಲ್ಲಿ ಲಿಥಿಯಂ ಪತ್ತೆಯಾಗುತ್ತಿರುವುದು ಇದು ಕೇವಲ ಎರಡನೇ ಬಾರಿ. ರಾಯಚೂರಿನ ಅಮರೇಶ್ವರದಲ್ಲಿ ಈ ಲೋಹ ಪತ್ತೆಯಾಗಿದ್ದು, ಇಲ್ಲಿಯೂ ಸಹ ಅರಣ್ಯ ಇಲಾಖೆ ಉತ್ಖನನಕ್ಕೆ ಅನುಮತಿಸಿದರೆ ಕರ್ನಾಟಕವು ದೇಶದಲ್ಲಿ ಲಿಥಿಯಂ ಸಿಕ್ಕ ಮೊದಲ ರಾಜ್ಯವಾಗಲಿದೆ ಎಂದು ಇಲಾಖೆ ತಿಳಿಸಿದೆ. 2023 ರಲ್ಲಿಯೂ ಲಿಥಿಯಂ ನಿಕ್ಷೇಪ ಪತ್ತೆ 2025 ರ ನವೆಂಬರ್‌ನಲ್ಲಿ ನಡೆದ ವಿವರವಾದ ಮಂಡಳಿಯ ಸಭೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳು ಸಂಶೋಧನೆಗಳು ಮತ್ತು ಪಡೆಯಬೇಕಾದ ಅನುಮತಿಗಳ ವಿವರಗಳನ್ನು ಚರ್ಚಿಸಿದ್ದಾರೆ. ಅಪರೂಪದ ಮತ್ತು ಅಮೂಲ್ಯ ಲೋಹಗಳ ಅಧ್ಯಯನ ಮತ್ತು ಪರಿಶೋಧನೆಯನ್ನು ನಾಲ್ಕು ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲ ಎರಡು ಹಂತಗಳಲ್ಲಿ ಸ್ಥಳ ಪರಿಶೀಲನೆ, ಪಿಟ್ಟಿಂಗ್ ಮತ್ತು ಬೇಲಿ ಹಾಕಿದರೆ, ಕೊನೆಯ ಎರಡು ಹಂತಗಳಲ್ಲಿ 500 ಮೀಟರ್‌ಗಳವರೆಗೆ ಪ್ರಾಥಮಿಕ ಗಣಿಗಾರಿಕೆಯನ್ನು ಮಾಡಲಾಗುತ್ತದೆ. ಕೊಪ್ಪಳ ಮತ್ತು ರಾಯಚೂರಿನಲ್ಲಿ ಮೊದಲ ಎರಡು ಹಂತಗಳು ಪೂರ್ಣಗೊಂಡಿವೆ. 2020 ರಲ್ಲಿ ಅಮ್ರಾಪುರದಲ್ಲಿ ದೊಡ್ಡ ಪ್ರಮಾಣದ ಚಿನ್ನದ ನಿಕ್ಷೇಪಗಳು ಕಂಡುಬಂದಿದ್ದರೆ 2023 ರಲ್ಲಿ ಲಿಥಿಯಂ ನಿಕ್ಷೇಪ ಕಂಡು ಬಂದಿತ್ತು. 2024-25 ರಿಂದ ಕೆಲಸ ಮುಂದುವರೆಯಿತಾದರೂ ಎರಡೂ ಸ್ಥಳಗಳಲ್ಲಿ ಇಲ್ಲಿಯವರೆಗೆ ಯಾವುದೇ ಉತ್ಖನನ ಕೆಲಸ ನಡೆದಿಲ್ಲ. ಸಂಪನ್ಮೂಲವನ್ನು ಅಕ್ರಮವಾಗಿ ಬಳಸಿಕೊಳ್ಳಲು ಬಯಸುವವರು ಮತ್ತು ಅಧ್ಯಯನವನ್ನು ನಿಲ್ಲಿಸುವವರಿಂದ ನಮ್ಮ ಸಿಬ್ಬಂದಿಗೆ ನಿರಂತರವಾಗಿ ಬೆದರಿಕೆಗಳು ಬರುತ್ತಿವೆ. ಹೀಗಾಗಿ ನಮ್ಮ ಸಿಬ್ಬಂದಿಯ ಸುರಕ್ಷತೆಯ ಬಗ್ಗೆಯೂ ನಾವು ಚಿಂತಿತರಾಗಿದ್ದೇವೆ ಇಲಾಖೆಯವರು ತಿಳಿಸಿದ್ದಾರೆ. ಇದನ್ನೂ ಓದಿ ಭಾರತದ 3 ರಾಜ್ಯಗಳಲ್ಲಿ ಹೊಸ ಚಿನ್ನದ ಗಣಿಗಳು ಪತ್ತೆ; ದೇಶದ ಸ್ವರ್ಣ ದಾಹಕ್ಕೆ ಇದು ಸಾಕಾಗುತ್ತಾ? ಅನುಮತಿಗಾಗಿ ಇಲಾಖೆ ಮೇಲೆ ಒತ್ತಡ ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡುವಂತೆ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಹೇಳಿದ್ದು, ಲಿಂಗ್ಸುಗೂರ್ ಮೀಸಲು ಅರಣ್ಯ ಪ್ರದೇಶದಲ್ಲಿ ಲಿಥಿಯಂ ಹೊರತೆಗೆಯುವ ಪ್ರಸ್ತಾವನೆ ಬಂದರೆ, ಕುಷ್ಟಗಿಯ ಅಮ್ರಾಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆಗಾಗಿ ಅನುಮತಿ ಬೇಡಿದ್ದಾರೆ. ಗಣಿಗಾರಿಕೆಗಾಗಿ ನಾವು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ. ಅರಣ್ಯಗಳು ಸಹ ಪರಿಸರ ಸಂಪತ್ತೇ ಆಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ವಾರದ ಹಿಂದಷ್ಟೇ ಮದ್ವೆಯಾಗಿದ್ದ ಜೋಡಿಯನ್ನು ಅಗಲಿಸಿದ ಜಾತಿ: ಹೆಂಡ್ತಿಬೇಕೆಂದು ಎಸ್ಪಿ ಮೊರೆ ಹೋದ ಯುವಕ

ಕೊಪ್ಪಳ ಜಿಲ್ಲೆಯಲ್ಲಿ ಹಸಮಣೆ ಏರಬೇಕಾಗಿದ್ದ ಜೋಡಿ ಫೋಟೋ ಶೂಟ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಅಪಘಾತದಲ್ಲಿ ದುರಂತ ಅಂತ್ಯಕಂಡಿತ್ತು. ಈ ಸುದ್ದಿ ಕೇಳಿ ಕೊಪ್ಪಳ ಜಿಲ್ಲೆ ಜನರ ಕಣ್ಣಂಚಲ್ಲಿ ನೀರು ತಿರಿಸಿತ್ತು. ಇದರ ಮಧ್ಯೆ ಇನ್ನೊಂದು ಜೋಡಿ ವಾರದ ಹಿಂದಷ್ಟೇ ಮದುವೆಯಾಗಿದ್ದ ಜೋಡಿಯನ್ನು ಜೋಡಿಯನ್ನು ಯುವತಿಯ ಪೋಷಕರು ಅಗಲಿಸಿದ್ದಾರೆ. ಹೀಗಾಗಿ ಯುವಕ ಹೆಂಡ್ತಿ ಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಅಷ್ಟಕ್ಕೂ ಏನಿದು,ನವ ಜೋಡಿ,ಜಾತಿ ವ್ಯವಸ್ಥೆ ಅಂತೀರಾ ಈ ಸ್ಟೋರಿ ಓದಿ. ಕೊಪ್ಪಳ, (ಡಿಸೆಂಬರ್ 09): ಕೊಪ್ಪಳ (Koppal) ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಹಿಂದುಳಿದ ಜಿಲ್ಲೆ.ಕೊಪ್ಪಳ ಜಿಲ್ಲೆಯಲ್ಲಿ ಇನ್ನು ಜಾತಿ (caste )ವ್ಯವಸ್ಥೆ ಜೀವಂತವಾಗಿದೆ.ಜಿಲ್ಲೆಯ ಕೆಲ ಕಡೆ ಅಸ್ಪ್ರಶ್ಯತೆ ಅನ್ನೋ ಪೆಡಂಭೂತ ಜೀವಂತವಾಗಿದೆ. ಕಳೆದ ಕೆಲ ದಿನಗಳ ಹಿಂದೆ ದಲಿತರ ಮನೆಗೆ ಬೆಂಕಿ ಹಚ್ಚಿರೋ ಪ್ರಕರಣ ಇನ್ನು ಮಾಸಿಲ್ಲ.ಹೀಗೆ ಜಿಲ್ಲೆಯಲ್ಲಿ ಒಂದಲ್ಲ ಒಂದು ಕಡೆ ಜಾತಿ ಪದ್ದತಿ ಇನ್ನು ಜೀವಂತವಾಗಿದೆ. ಇದೀಗ ಇದೇ ಜಾತಿ ಪದ್ದತಿ ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿಯನ್ನ ಬೇರ್ಪಡಿಸಿದೆ. ಹೌದು…ಕೊಪ್ಪಳ ತಾಲೂಕಿನ ಚುಕ್ಕನಕಲ್ ಗ್ರಾಮದ ನಿವಾಸಿ ಗಣೇಶ್ ಹಾಗೂ ಉಷಾರಾಣಿ ಪ್ರೀತಿಸಿದ್ದು, ಕಳೆದ ವಾರ ಹುಲಗೆಮ್ಮ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಯುವಕ ಗಣೇಶ್ ಉಷಾರಾಣಿಗೆ ತಾಳಿ ಕಟ್ಟಿ ಕಾಲುಂಗರ ಹಾಕಿದ್ದ. ಆದ್ರೆ, ಮದುವೆಯಾದ ಒಂದು ವಾರದ ಬಳಿಕ ಗಣೇಶ ಹಾಗೂ ಉಷಾರಾಣಿಯನ್ನು ಬೇರೆ ಮಾಡಲಾಗಿದೆ. ರಾಜೀ ಸಂಧಾನಕ್ಕೆ ಅಂತ ಬಂದು ಉಷಾರಾಣಿ ಪೋಷಕರು ಆಕೆಯನ್ನ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಮದುವೆಗೂ ಮುನ್ನ ಮಸಣ ಸೇರಿದ ಜೋಡಿ: ಅಪಘಾತಕ್ಕೂ ಮೊದಲು ನಡೆದಿತ್ತು ಫೋಟೋ ಶೂಟ್ ಗಣೇಶ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದರೆ, ಉಷಾರಾಣಿ ರಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ, ಜೀವಭಯದಿಂದ ನವ ಜೋಡಿ ಪೊಲೀಸ್ ಠಾಣೆಗೆ ಬಂದಾಗ ಇಬ್ಬರನ್ನು ದೂರ ಮಾಡಿದ್ದಾರೆ. ಇದರಿಂದ ಕಂಗಾಲಾದ ಗಣೇಶ್, ಇದಕ್ಕೆಲ್ಲ ಜಾತಿ ವ್ಯವಸ್ಥೆ ಕಾರಣ ಎಂದು ಆರೋಪಿಸಿದ್ದು, ಹೆಂಡತಿ ಬೇಕೆಂದು ಎಸ್ ಕೊಪ್ಪಳ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾನೆ. ಈ ಸಂಬಂಧ ಗಣೇಶ್ ತಂದೆ ಪ್ರತಿಕ್ರಿಯಿಸಿದ್ದು, ಗಣೇಶ್ ಕಳೆದ ಒಂದು ವಾರದ ಹಿಂದೆ ಮದುವೆಯಾದ ಜೋಡಿಯನ್ನ ಇದೀಗ ಪೋಷಕರು ಬೇರ್ಪಡಿಸಿದ್ದಾರೆ. ಒಂದು ವಾರದಿಂದ ಪತ್ನಿಗಾಗಿ ಗಣೇಶ್ ಅಲೆದಾಡುತ್ತಿದ್ದಾನೆ. ಒಂದು ವಾರದಿಂದ ಹೆಂಡತಿ ಮುಖ ನೋಡದ ಹಿನ್ನಲೆ ನ್ಯಾಯಕ್ಕಾಗಿ ಇಂದು ತನ್ನ ತಂದೆ ಸುರೇಶ್ ಜೊತೆ ಎಸ್ ಪಿ ಕಚೇರಿಗೆ ಬಂದಿದ್ದಾನೆ.ನಿನ್ನೆ ಅಷ್ಟೇ ಕೊಪ್ಪಳದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಗೆ ಹೋದ ಜೋಡಿ ಅಪಘಾತದಲ್ಲಿ ದುರಂತ ಸಾವು ಕಂಡಿದೆ. ಈ ಘಟನೆ ಮಾಸೋ ಮುನ್ನವೇ ಕೊಪ್ಪಳದಲ್ಲಿ ಇದೀಗ ಜಾತಿ ವ್ಯವಸ್ಥೆಯಿಂದ ನವ ಜೋಡಿ ದೂರಾಗಿವೆ. ಮಗನಿಗೆ ಏನಾದರೂ ಆದ್ರೆ ಯಾರು ಹೊಣೆ? ಮದುವೆಯಾದ ಯವತಿ ಬಂದು ಇಷ್ಟ ಇಲ್ಲ ಅಂದ್ರೆ ಎಲ್ಲವೂ ಸರಿ ಆಗತ್ತೆ. ನನ್ನ ಮಗ ಕೈ ಬಿಡುತ್ತಾನೆ ಎಂದು ಅಳಲು ತೋಡಿಕೊಂಡಿದ್ದಾರೆ. ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾರದಿಂದ RCB ಅಭಿಮಾನಿಗಳಿಗೆ ಗುಡ್ ನ್ಯೂಸ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡಬೇಕೆಂದು ಕೆಎಸ್ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಮನವಿಗೆ ಸರ್ಕಾರದ ಕಡೆಯಿಂದಲೂ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತವರಿನಲ್ಲಿ ಕಣಕ್ಕಿಳಿದೆಯಾ? ಈ ಪ್ರಶ್ನೆಗೆ ಅತೀ ಶೀಘ್ರದಲ್ಲೇ ಉತ್ತರ ದೊರೆಯಲಿದೆ. ಅಂದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಪಂದ್ಯಗಳಿಗೆ ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯಿದೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಕೆಎಸ್ ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಭೇಟಿಯ ಬಳಿಕ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ವೆಂಕಟೇಶ್ ಪ್ರಸಾದ್ ಅವರು ಬೆಂಗಳೂರಿನಲ್ಲಿ ಪಂದ್ಯ ಆಯೋಜಿಸಲು ಪರ್ಮಿಷನ್ ಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ನಾನು ಹಾಗೂ ಮುಖ್ಯಮಂತ್ರಿ ಚರ್ಚಿಸಿ ನಾಳೆ ನಡೆಯಲಿರುವ ಕ್ಯಾಬಿನೆಟ್ನಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದೇನೆ. ನಮಗೆ ಕ್ರಿಕೆಟ್ ನಿಲ್ಲಿಸಬೇಕೆಂದು ಯಾವುದೇ ಉದ್ದೇಶವಿಲ್ಲ. ಆದರೆ ಜನಸಂದಣಿ ನಿಯಂತ್ರಣ ವಿಚಾರದಲ್ಲಿ ನಾವು ಕೆಲ ನಿಯಮಗಳನ್ನು ಪಾಲಿಸಬೇಕಿದೆ. ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದ ಆಯೋಗ ಶಿಫಾರಸು ಮಾಡಿರುವ ಸಲಹೆಗಳನ್ನು ನಾವು ಪಾಲನೆ ಮಾಡಬೇಕಿದೆ. ಒಂದೇ ಸಲ ಪಾಲನೆ ಮಾಡಲು ಸಾಧ್ಯವಾಗದೇ ಇರಬಹುದು. ಆದರೆ ಅದನ್ನೆಲ್ಲಾ ಪಾಲನೆ ಮಾಡಬೇಕೆಂದು ನಮ್ಮ ಉದ್ಧೇಶ. ಇದಕ್ಕೆ ಕೆಎಸ್ಸಿಎ ನೂತನ ಅಧ್ಯಕ್ಷರು ಕೂಡ ಒಪ್ಪಿಕೊಂಡಿದ್ದಾರೆ. ನಮ್ಮ ರಾಜ್ಯದ ಗೌರವ, ಸ್ವಾಭಿಮಾನ ಏನಿದೆ, ಅದಕ್ಕೆ ಧಕ್ಕೆ ಬರದಂತೆ ಎಲ್ಲಾ ನಮ್ಮ ಕ್ರಿಕೆಟ್ ಅಭಿಮಾನಿಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅದರಂತೆ ಆರ್ಸಿಬಿ ಪಂದ್ಯಗಳನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ಅನುವು ಮಾಡಿಕೊಡುವ ಸಲುವಾಗಿ ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸ. ಇತ್ತ ಸರ್ಕಾರದ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ನಡೆಯುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಆರ್ಸಿಬಿ ಸ್ಟೇಡಿಯಂಗೆ ನಿಷೇಧವೇಕೆ? ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಆರ್ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಕಾಲ್ತುಳಿತ ದುರಂತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಈ ತನಿಖೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಲೋಪದೋಷಗಳು ಬಹಿರಂಗವಾಗಿದ್ದವು. ಅಲ್ಲದೆ ಕ್ರೀಡಾಂಗಣದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಈ ದುರಂತದ ಬಳಿಕ ಬಿಸಿಸಿಐ ಬೆಂಗಳೂರಿನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರಲಿಲ್ಲ. ಇದನ್ನೂ ಓದಿ: ಕೇವಲ ೧ ರನ್ನಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಟೀಮ್ ಇಂಡಿಯಾ ಇದೀಗ ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದ ಆಯೋಗವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಲೋಪದೋಷಗಳ ಬಗ್ಗೆ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಸೂಚಿಸಲಾದ ಸಲಹೆಗಳನ್ನು ಪಾಲಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಒಪ್ಪಿಕೊಂಡಿದೆ. ಹೀಗಾಗಿ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ಸಿಗಲಿದೆ.