ಕನ್ನಡ English हिन्दी తెలుగు मराठी ગુજરાતી বাংলা தமிழ் മലയാളം ਪੰਜਾਬੀ অসমীয়া

State News

ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನಲ್ಲಿ ಕ್ರಿಕೆಟ್ ದಿಗ್ಗಜರ ಪುನರ್ಮಿಲನ

Legends Pro T20 League 2026: ಟಿ20 ಲೀಗ್​ಗೆ ಹೊಸ ಟೂರ್ನಿಯೊಂದು ಸೇರ್ಪಡೆಯಾಗಲಿದೆ. ಈ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ. ಕ್ರಿಸ್ ಗೇಲ್, ಶೇನ್ ವಾಟ್ಸನ್, ಹರ್ಭಜನ್ ಸಿಂಗ್, ಡೇಲ್ ಸ್ಟೇನ್ ಸೇರಿದಂತೆ ಲೆಜೆಂಡ್ಸ್ ಆಟಗಾರರು ಕಣಕ್ಕಿಳಿಯಲಿದ್ದಾರೆ. ಲೆಜೆಂಡ್ಸ್ ಪ್ರೊ ಟಿ20 ಲೀಗ್​ ಹೆಸರಿನ ಈ ಟೂರ್ನಿಯು ಜನವರಿ 26 ರಿಂದ ಫೆಬ್ರವರಿ 4 ರ ನಡುವೆ ಗೋವಾದಲ್ಲಿ ನಡೆಯಲಿದೆ.  ಲೆಜೆಂಡ್ಸ್ ಪ್ರೊ ಟಿ20 ಲೀಗ್ ತನ್ನ ಮೊದಲ ಸೀಸನ್‌ನಲ್ಲಿ ಕ್ರಿಸ್ ಗೇಲ್, ಜಾಕ್ಸ್​ ಕಾಲಿಸ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು ಮತ್ತು ಸ್ಟುವರ್ಟ್ ಬಿನ್ನಿ ಸೇರಿದಂತೆ ಹಲವು ಕ್ರಿಕೆಟ್ ತಾರೆಯಾರನ್ನು ಒಂದುಗೂಡಿಸುತ್ತಿದೆ. ವರ್ಷಗಳ ಕಾಲ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದವರು, ಪೈಪೋಟಿ ನಡೆಸಿದ್ದವರು, ಅನೇಕ ನೆನಪುಗಳನ್ನು ನಿರ್ಮಿಸಿದ್ದವರು ಈ ಬಾರಿ ಎಲ್ಲರೂ ಒಂದೇ ವೇದಿಕೆಯಲ್ಲಿ ಪುನರ್ಮಿಲನಗೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಕ್ರಿಸ್ ಗೇಲ್, “ನನ್ನ ಅತ್ಯುತ್ತಮ ಕ್ರಿಕೆಟ್ ದಿನಗಳು ಮತ್ತೆ ನೆನಪಾಗುತ್ತಿವೆ. ಕಾಲಿಸ್ ವಿರುದ್ಧ ಆಡಿದಾಗ ಅವರನ್ನು ಮೀರಿಸುವುದು ಅಸಾಧ್ಯ ಎನಿಸುತ್ತಿತ್ತು. ಉತ್ತಪ್ಪ ಜೊತೆ ಬ್ಯಾಟಿಂಗ್ ಬಗ್ಗೆ ಅನೇಕ ಸಲ ಮಾತುಕತೆ ನಡೆಸಿದ್ದೇನೆ, ರಾಯುಡು ಜೊತೆ ತುಂಬಾ ತಮಾಷೆ ಮಾಡಿಕೊಂಡಿದ್ದೇನೆ. ಈಗ ಧವನ್, ವಾಟ್ಸನ್ ಜೊತೆ ಮತ್ತೆ ಆಡಲು ಈ ಲೆಜೆಂಡ್ಸ್ ಪ್ರೊ T20 ಲೀಗ್ ಅವಕಾಶ ನೀಡುತ್ತಿದೆ,” ಎಂದರು. ಇನ್ನು ಜಾಕ್ಸ್ ಕಾಲಿಸ್, ಕ್ರಿಕೆಟ್‌ನಿಂದ ಸ್ವಲ್ಪ ದೂರವಾದ ಮೇಲೆ ಕೈಯಲ್ಲಿ ಬ್ಯಾಟ್ ಹಿಡಿಯುವ ಅನುಭವ ನನಗೆ ಬಹಳ ಮಿಸ್ ಆಗುತ್ತಿತ್ತು. ಈಗ ಈ ಲೀಗ್ ಮೂಲಕ ಪುನಃ ಬ್ಯಾಟ್ ಬೀಸುವುದು, ಬಾಲ್ ಹೊಡೆಯುವುದು, ಟೈಮಿಂಗ್ ಹುಡುಕುವುದು ಮತ್ತೆ ಆಟಗಾರನಂತೆ ಭಾಸವಾಗುವುದು ಇವೆಲ್ಲವೂ ಮರಳಿ ಬರುವುದಕ್ಕೆ ಸಂತಸವಾಗಿದೆ ಎಂದರು. ನಾನು ರಾಯುಡು ಅವರನ್ನು ಎದುರಾಳಿಯಾಗಿ ಎದುರಿಸಿದ್ದೇನೆ, ನಂತರ ಅವರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದೇನೆ. ದಿನೇಶ್ ಕಾರ್ತಿಕ್ ಜೊತೆ ಪಂದ್ಯ ಮುಗಿಸುವ ತಂತ್ರಗಳ ಬಗ್ಗೆ ಅನೇಕ ಬಾರಿ ಚರ್ಚಿಸಿದ್ದೇವೆ. ಅಂಡರ್-19 ದಿನಗಳಿಂದ ಇರುವ ನಮ್ಮ ಸ್ನೇಹವೂ ವಿಶೇಷ ಎಂದು ರಾಬಿನ್ ಉತ್ತಪ್ಪ ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು. ಇನ್ನು ಹೊಸ ಲೀಗ್​ ಬಗ್ಗೆ ಮಾತನಾಡಿದ ಅಂಬಟಿ ರಾಯುಡು, ಒಟ್ಟಿಗೆ ಪಂದ್ಯಗಳನ್ನು ಆಡಿದ್ದ, ಟ್ರೋಫಿ ಗೆದ್ದಿದ್ದ ಆಟಗಾರರನ್ನು ಮತ್ತೆ ನೋಡಿದಾಗ ಹಳೆಯ ದಿನಗಳು ಕಣ್ಣ ಮುಂದೆ ಬರುತ್ತವೆ. ಬಿನ್ನಿ ಜೊತೆಗಿನ ಆಟ, ಗೇಲ್ ವಿರುದ್ಧ ಮರೆಯಲಾಗದ ಪಂದ್ಯಗಳು, ವಾಟ್ಸನ್ ಜೊತೆಗಿನ ಕ್ಷಣಗಳು ತುಂಬಾ ವಿಶೇಷ. ಈ ಲೀಗ್ ಇವೆಲ್ಲವನ್ನೂ ಮತ್ತೆ ನೀಡುತ್ತಿರುವುದು ತುಂಬಾ ಸಂತೋಷ ಎಂದರು. ಇದನ್ನೂ ಓದಿ: ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಭಾರತೀಯ ಮೂಲದ ಇಬ್ಬರಿಗೆ ಸ್ಥಾನ ನನಗೆ ಕ್ರಿಕೆಟ್ ಮಾತ್ರವಲ್ಲ, ಈ ತಂಡವೂ ರೋಮಾಂಚನಕಾರಿಯಾಗಿದೆ. ನಾವು ಪ್ರಪಂಚದಾದ್ಯಂತ ಆಡಿದ್ದೇವೆ, ಸ್ಕೋರ್‌ಕಾರ್ಡ್ ಮೀರಿದ ಅನೇಕ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ಅವನ್ನೆಲ್ಲ ಮತ್ತೆ ಅನುಭವಿಸುವ ಅವಕಾಶ ಸಿಕ್ಕಿರುವುದು ತುಂಬಾ ಸಂತೋಷ ಎಂದು ಸ್ಟುವರ್ಟ್ ಬಿನ್ನಿ ಹೇಳಿದರು.

‘ಧುರಂದರ್’ ಸಿನಿಮಾದ ‘ರಾಜಕೀಯ’ದ ಬಗ್ಗೆ ಹೃತಿಕ್ ರೋಷನ್ ಅಸಮಾಧಾನ

Dhurandhar movie: ರಣ್ವೀರ್ ಸಿಂಗ್ ನಟನೆಯ ‘ಧುರಂದರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಭರ್ಜರಿ ಕಲೆಕ್ಷನ್ ಅನ್ನು ಮಾಡುತ್ತಿದೆ. ಅದರ ಜೊತೆಗೆ ಸಿನಿಮಾನಲ್ಲಿ ಪ್ರೊಪೊಗಾಂಡ ಅಂಶಗಳು ಇವೆ ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ. ಇದರ ನಡುವೆ ಸ್ಟಾರ್ ನಟ ಹೃತಿಕ್ ರೋಷನ್, ‘ಧುರಂದರ್’ ಸಿನಿಮಾದ ರಾಜಕೀಯ ತಮಗೆ ಇಷ್ಟವಾಗಲಿಲ್ಲ ಎಂದಿದ್ದಾರೆ. ರಣ್ವೀರ್ ಸಿಂಗ್ (Ranveer Singh) ನಟಿಸಿರುವ ‘ಧುರಂದರ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು ಭಾರಿ ದೊಡ್ಡ ಹಿಟ್ ಆಗಿದೆ. ದಿನದಿಂದ ದಿನಕ್ಕೆ ಸಿನಿಮಾದ ಕಲೆಕ್ಷನ್ ಏರುತ್ತಲೇ ಸಾಗುತ್ತಿದೆ. ಭಾರತೀಯ ಸೈನಿಕನೊಬ್ಬ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಐಎಸ್​​ಐ ಸೇರಿಕೊಂಡು ಅಲ್ಲಿನ ಮಾಹಿತಿಯನ್ನು ಭಾರತಕ್ಕೆ ವರ್ಗಾಯಿಸುವ ಹಾಗೂ ಐಎಸ್​​ಐನ ಮುಖ್ಯಸ್ಥರುಗಳ ಬಂಧನಕ್ಕೆ, ಸಾವಿಗೆ ಕಾರಣವಾಗುವ ಕತೆಯನ್ನು ‘ಧುರಂದರ್’ ಸಿನಿಮಾ ಒಳಗೊಂಡಿದೆ. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ. ಇದೀಗ ಖ್ಯಾತ ನಟ ಹೃತಿಕ್ ರೋಷನ್, ‘ಧುರಂದರ್’ ಬಗ್ಗೆ ಇನ್ಸ್​ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದು, ‘ಸಿನಿಮಾದ ರಾಜಕೀಯ’ ಇಷ್ಟವಾಗಲಿಲ್ಲ ಎಂದಿದ್ದಾರೆ. ಸಿನಿಮಾದ ಬಗ್ಗೆ ಇನ್​​ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿರುವ ಹೃತಿಕ್ ರೋಷನ್, ‘ನನಗೆ ಸಿನಿಮಾ ತುಂಬಾ ಇಷ್ಟವಾಯ್ತು, ಸಿನಿಮಾಕ್ಕಾಗಿ ಎಂಥಹಾ ಸಾಹಸ ಬೇಕಾದರೂ ಮಾಡುವ, ಕತೆಯನ್ನು ತಾವಂದುಕೊಂಡಂತೆ ಹೇಳಲು ಪ್ರಯತ್ನ ಮಾಡುವ ವ್ಯಕ್ತಿಗಳೆಂದರೆ ನನಗೆ ಬಹಳ ಪ್ರೀತಿ. ‘ಧುರಂಧರ್’ ನಲ್ಲಿ ಹಾಗೆಯೇ ಆಗಿದೆ. ಅಂಥಹಾ ಅದ್ಭುತ ಸಾಹಸಕ್ಕೆ ಧುರಂಧರ್ ಒಂದು ಉದಾಹರಣೆ. ಕಥೆ ಹೇಳಿರುವ ರೀತಿ ತುಂಬಾ ಇಷ್ಟವಾಯಿತು’ ಎಂದಿದ್ದಾರೆ ಹೃತಿಕ್ ರೋಷನ್. ಆದರೆ ಹೃತಿಕ್ ಅವರು ಮುಂದಿನ ಸಾಲುಗಳು ಈಗ ಚರ್ಚೆಗೆ ಕಾರಣವಾಗಿವೆ. ‘ಸಿನಿಮಾದ ರಾಜಕೀಯವನ್ನು ನಾನು ಒಪ್ಪದೇ ಇರಬಹುದು, ಮತ್ತು ನಾವು ಚಲನಚಿತ್ರ ಕರ್ಮಿಗಳಾಗಿ ವಿಶ್ವದ ನಾಗರಿಕರಾಗಿ ಹೊರಬೇಕಾದ ಜವಾಬ್ದಾರಿಗಳ ಬಗ್ಗೆ ಚರ್ಚಿಸಬಹುದು. ಆದಾಗ್ಯೂ, ನಾನು ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಇದನ್ನು ಹೇಗೆ ಪ್ರೀತಿಸಿದೆ ಮತ್ತು ಕಲಿತಿದ್ದೇನೆ ಎಂಬುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದೊಂದು ಅದ್ಭುತ ಸಿನಿಮಾ’ ಎಂದಿದ್ದಾರೆ ಹೃತಿಕ್ ರೋಷನ್. ‘ಧುರಂದರ್’ ಸಿನಿಮಾನಲ್ಲಿನ ಕೆಲವು ವಿಷಯಗಳು ರಾಜಕೀಯ ಪಕ್ಷವೊಂದರ ಪರವಾಗಿವೆ, ಒಬ್ಬ ರಾಜಕೀಯ ನಾಯಕರನ್ನು ಹೊಗಳುವ ರೀತಿಯಲ್ಲಿವೆ ಇದು ಸಹ ಪ್ರಪೊಗಾಂಡ ಸಿನಿಮಾ ಎಂಬ ಚರ್ಚೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಹೃತಿಕ್ ರೋಷನ್ ಸಹ ಪರೋಕ್ಷವಾಗಿ ಇದೇ ವಿಷಯದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ಸರ್ಕಾರ ಅಸಮರ್ಥ ಸರ್ಕಾರ ಎಂಬ ರೀತಿಯ ಸಂಭಾಷಣೆಗಳು ಸಿನಿಮಾನಲ್ಲಿವೆಯಂತೆ. ‘ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ, ಪಾಕಿಸ್ತಾನ ಎರಡನೇ ಸ್ಥಾನದಲ್ಲಿ ಬರುತ್ತದೆ’ ಎಂಬ ಸಂಭಾಷಣೆ ಸಿನಿಮಾನಲ್ಲಿದೆ. ಅದರ ಜೊತೆಗೆ ‘ಎಷ್ಟು ಸಾಧ್ಯವೋ ಅಷ್ಟು ಸಾಕ್ಷ್ಯ ಸಂಗ್ರಹಿಸು, ಮುಂದೊಂದು ದಿನ ದೇಶದ ಬಗ್ಗೆ ನಿಜವಾದ ಕಾಳಜಿ ಇರುವವರು ಬರಬಹುದು ಆಗ ಬೇಕಾಗುತ್ತದೆ. ನಮ್ಮ ವೇಳೆ ಬರುವವರೆಗೂ ಕಾಯಬೇಕು’ ಎಂಬ ಸಂಭಾಷಣೆ ಸಿನಿಮಾನಲ್ಲಿದೆ. ಈ ಕಾರಣಗಳಿಗಾಗಿ ಸಿನಿಮಾವನ್ನು ಪ್ರೊಪೊಗಾಂಡ ಸಿನಿಮಾ ಎನ್ನಲಾಗುತ್ತಿದೆ.

ಭಾರತದ ಅತ್ಯಂತ ಜನಪ್ರಿಯ ತಾರೆಯರ​ ಪಟ್ಟಿಯಲ್ಲಿ ಕನ್ನಡದ ಮೂವರಿಗೆ ಸ್ಥಾನ

IMDb 2025ರ ಭಾರತದ ಅತ್ಯಂತ ಜನಪ್ರಿಯ ತಾರೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಶಾರುಖ್, ಸಲ್ಮಾನ್ ಸ್ಥಾನ ಪಡೆದಿಲ್ಲ. ಟಾಪ್ 10ರಲ್ಲಿ ಬಹುತೇಕ ಹೊಸ ಮುಖಗಳಿದ್ದು, ಮೂವರು ಕನ್ನಡದ ಕಲಾವಿದರಾದ ರಶ್ಮಿಕಾ ಮಂದಣ್ಣ (6), ರುಕ್ಮಿಣಿ ವಸಂತ್ (9), ರಿಷಬ್ ಶೆಟ್ಟಿ (10) ಸ್ಥಾನ ಗಳಿಸಿದ್ದಾರೆ. 2025ನೇ ಸಾಲಿನ ‘ಭಾರತದ ಅತ್ಯಂತ ಜನಪ್ರಿಯ ತಾರೆ’ ಪಟ್ಟಿಯನ್ನು ಐಎಂಡಿಬಿ ರಿಲೀಸ್ ಮಾಡಿದೆ. ಇದರಲ್ಲಿ ಶಾರುಖ್ ಖಾನ್​ ಆಗಲಿ, ಸಲ್ಮಾನ್ ಖಾನ್ ಆಗಲಿ ಸ್ಥಾನ ಪಡೆದಿಲ್ಲ. ಟಾಪ್ 10ರಲ್ಲಿ ಇರುವ ಬಹುತೇಕರು ಹೊಸ ಮುಖಗಳು. ಇದರಲ್ಲಿ ಕನ್ನಡದ ಮೂವರಿಗೆ ಸ್ಥಾನ ಸಿಕ್ಕಿದೆ ಎಂಬುದು ಮತ್ತೊಂದು ವಿಶೇಷ. ತೆಲುಗು ಹಾಗೂ ತಮಿಳಿನ ಯಾರೊಬ್ಬ ಕಲಾವಿದರೂ ಇದರಲ್ಲಿ ಸ್ಥಾನ ಪಡೆದಿಲ್ಲ. ಐಎಂಡಿಬಿ ಪ್ರತಿ ವರ್ಷದ ಅಂತ್ಯದಲ್ಲಿ ಜನಪ್ರಿಯ ಸ್ಟಾರ್ಸ್​ ಪಟ್ಟಿ ಬಿಡುಗಡೆ ಮಾಡುತ್ತದೆ. ವರ್ಷ ಪೂರ್ತಿ ಹೆಚ್ಚು ಟ್ರೆಂಡ್ ಆದ ಸೆಲೆಬ್ರಿಟಿಗಳ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಕನ್ನಡದವರಾದ ರಶ್ಮಿಕಾ ಮಂದಣ್ಣ, ರಿಷಬ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಪಟ್ಟಿಯಲ್ಲಿ ಇದ್ದಾರೆ. ‘ಸಯ್ಯಾರ’ ಸಿನಿಮಾ ಮೂಲಕ ಹಿಟ್ ಆದ ಜೋಡಿ ಎಂದರೆ ಅದು ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡಾ. ಇವರಿಬ್ಬರು ಜನಪ್ರಿಯ ತಾರೆ ಪಟ್ಟಿಯಲ್ಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಆಮಿರ್ ಖಾನ್ ಇದ್ದಾರೆ. ಇಶಾನ್ ಖಟ್ಟರ್​ಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ‘ಬ್ಯಾಡ್ಸ್ ಆಫ್ ಬಾಲಿವುಡ್’ ಮೂಲಕ ಮಿಂಚಿದ ಲಕ್ಷ್ಯ್​ಗೆ ಐದನೇ ಸ್ಥಾನ ಸಿಕ್ಕಿದೆ. ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸದ್ಯ ಪರಭಾಷೆಯಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಆರನೇ ಸ್ಥಾನ ಸಿಕ್ಕಿದೆ.‘ಲೋಕಃ’ ಸಿನಿಮಾ ಮೂಲಕ ಮತ್ತಷ್ಟು ಜನ ಮನ್ನಣೆ ಪಡೆದ ಕಲ್ಯಾಣಿ ಪ್ರಿಯದರ್ಶನ್​ 7ನೇ ಸ್ಥಾನದಲ್ಲಿ ಇದ್ದಾರೆ. ಗ್ಲಾಮರ್ ಮೂಲಕ ಮಿಂಚೋ ತೃಪ್ತಿ ದಿಮ್ರಿಗೆ ಪಟ್ಟಿಯಲ್ಲಿ 8ನೇ ಸ್ಥಾನ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ದೊಡ್ಡ ಯಶಸ್ಸು ಕಂಡಿತು. ಈ ಚಿತ್ರದ ನಟಿ, ಪಕ್ಕಾ ಕನ್ನಡತಿ ರುಕ್ಮಿಣಿ ವಸಂತ್ ಅವರು ಈ ಲಿಸ್ಟ್​ನಲ್ಲಿ 9ನೇ ಸ್ಥಾನದಲ್ಲಿ ಇದ್ದಾರೆ. ಈ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ 10ನೇ ಸ್ಥಾನ ಸಿಕ್ಕಿದೆ. IMDb ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ನಿರ್ದೇಶಕರು 1)ಮೋಹಿತ್ ಸೂರಿ, 2) ಆರ್ಯನ್ ಖಾನ್,3) ಲೋಕೇಶ್ ಕನಗರಾಜ್,4) ಅನುರಾಗ್ ಕಶ್ಯಪ್, 5) ಪೃಥ್ವಿರಾಜ್ ಸುಕುಮಾರನ್, 6) ಆರ್.ಎಸ್. ಪ್ರಸನ್ನ, 7) ಅನುರಾಗ್ ಬಸು, 8) ಡಾಮಿನಿಕ್ ಅರುಣ್‌, 9) ಲಕ್ಷ್ಮಣ್ ಉಟೇಕರ್, 10) ನೀರಜ್ ಘಯ್ವಾನ್‌

ಯಶ್ ನಟನೆಯ ‘ಟಾಕ್ಸಿಕ್’ ಎದುರು ರಿಲೀಸ್ ಆಗ್ತಿದೆ ಐದು ದೊಡ್ಡ ಸಿನಿಮಾಗಳು

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19, 2026 ರಂದು ಈದ್/ಯುಗಾದಿ ಸಂದರ್ಭದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಐದು ದೊಡ್ಡ ಸಿನಿಮಾಗಳು ಪೈಪೋಟಿ ನೀಡಲಿವೆ. ಎಲ್ಲರೂ ಇದೇ ದಿನ ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳು ಇವೆ. ಆ ಬಗ್ಗೆ ಇಲ್ಲಿದೆ ವಿವರ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಇನ್ನು 100 ದಿನಗಳಲ್ಲಿ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ. ಕನ್ನಡ ಮಾತ್ರವಲ್ಲದೆ, ಇಂಗ್ಲಿಷ್ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಲಿದೆ. ಇನ್ನು ತೆಲುಗು, ತಮಿಳು, ಹಿಂದಿ ಮೊದಲಾದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗೆ ಬರುತ್ತಿದೆ. ಈಗ ‘ಟಾಕ್ಸಿಕ್’ ಸಿನಿಮಾ ಜೊತೆ ತೆರೆಗೆ ಬರಲು ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಸಿನಿಮಾಗಳು ಸಿದ್ಧವಾಗಿವೆ. ಮಾರ್ಚ್ 19 ಈದ್ ಹಬ್ಬ. ಅದೇ ದಿನ ಹಿಂದೂಗಳ ಹೊಸ ವರ್ಷ ಯುಗಾದಿ ಕೂಡ ಬಂದಿದೆ. ಈ ದಿನ ಗುರುವಾರ ಬಂದಿದ್ದು, ಸರ್ಕಾರಿ ರಜೆಯ ಲಾಭ ಪಡೆಯಲು ಸಿನಿಮಾ ತಂಡಗಳು ಮುಂದಾಗಿವೆ. ಶುಕ್ರವಾರ ಸಿನಿಮಾ ರಂಗದ ಪಾಲಿಗೆ ವಿಶೇಷ ಆಗಿರುವುದರಿಂದ ಸಾಂಪ್ರದಾಯಿಕ ವೀಕ್ಷಕರು ಹಾಗೂ ಸಿನಿ ಪ್ರಿಯರು ಚಿತ್ರಮಂದಿರಕ್ಕೆ ತೆರಳುತ್ತಾರೆ. ಶನಿವಾರ ಹಾಗೂ ಭಾನುವಾರ ಸಹಜವಾಗಿಯೇ ಅದ್ದೂರಿ ಕಲೆಕ್ಷನ್ ಆಗುತ್ತದೆ. ಈ ಎಲ್ಲಾ ಕಾರಣಕ್ಕೆ ‘ಟಾಕ್ಸಿಕ್’ ತಂಡ ಮಾರ್ಚ್ 19 ಅನ್ನು ಆಯ್ಕೆ ಮಾಡಿಕೊಂಡಿದೆ. ಇದೇ ಲೆಕ್ಕಾಚಾರದಲ್ಲಿ ಇನ್ನೂ ಹಲವು ಸಿನಿಮಾಗಳಿವೆ. ‘ಧಮಾಲ್ 4’ ಸದ್ಯದ ಮಾಹಿತಿ ಪ್ರಕಾರ್ ಅಜಯ್ ದೇವಗನ್ ಮೊದಲಾದವರು ನಟಿಸಿರೋ ‘ಧಮಾಲ್ 4’ ಸಿನಿಮಾ 2026ರ ಮಾರ್ಚ್ 20ಕ್ಕೆ ರಿಲೀಸ್ ಆಗಲಿದೆಯಂತೆ. ಹಿಂದಿ ಬೆಲ್ಟ್​ನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಾಲಿವುಡ್​ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ‘ಧಮಾಲ್’ ಕೂಡ ಒಂದು. ರಿತೇಶ್ ದೇಶ್​ಮುಖ್, ಅರ್ಷದ್ ವಾರ್ಸಿ ಮೊದಲಾದವರು ನಟಿಸಿದ್ದಾರೆ. ಧುರಂಧರ್ 2 ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರದ ಸೀಕ್ವೆಲ್ ಮಾರ್ಚ್ 19ರಂದು ತೆರೆಗೆ ಬರಲಿದೆ. ಈ ಸಿನಿಮಾ ಕೂಡ ಹಿಂದಿ ಬೆಲ್ಟ್​ನಲ್ಲಿ ಯಶ್​ ಸಿನಿಮಾಗೆ ಸ್ಪರ್ಧೆ ನೀಡಲಿದೆ. ತೆಲುಗಿನಲ್ಲಿ ತೆಲುಗಿನಲ್ಲಿ ಮಾರ್ಚ್​ ತಿಂಗಳಾಂತ್ಯಕ್ಕೆ ಮೂರು ಸಿನಿಮಾಗಳು ತೆರೆಗೆ ಬರಲು ರೆಡಿ ಆಗಿವೆ. ಈ ಪೈಕಿ ಅಡವಿ ಶೇಷ್ ಅವರ ‘ಡಕಾಯತ್’ (ಮಾರ್ಚ್ 19), ನಾನಿ ಅವರ ‘ದಿ ಪ್ಯಾರಡೈಸ್’ (ಮಾರ್ಚ್ 27) ಹಾಗೂ ರಾಮ್ ಚರಣ್ ಅವರ ‘ಪೆದ್ದಿ’ (ಮಾರ್ಚ್​ 27) ಟಾಕ್ಸಿಕ್​ ಜೊತೆ ಸ್ಪರ್ಧಿಸಲಿವೆ.

ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಭಾರತೀಯ ಮೂಲದ ಇಬ್ಬರಿಗೆ ಸ್ಥಾನ

Men’s U-19 World Cup 2026: ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಲಿರುವ ಅಂಡರ್-19 ಪುರುಷರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ. ಜನವರಿ 15 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಬಾಂಗ್ಲಾದೇಶ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ಕಿರಿಯ ಆಟಗಾರರು ಕಣಕ್ಕಿಳಿಯಲಿದ್ದಾರೆ. ಜನವರಿ 15 ರಿಂದ ಶುರುವಾಗಲಿರುವ ಅಂಡರ್​-19 ಪುರುಷರ ಕ್ರಿಕೆಟ್ ವಿಶ್ವಕಪ್​​ಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಭಾರತೀಯ ಮೂಲದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ತಂಡದ ನಾಯಕನಾಗಿ ಒಲೀವರ್ ಪೀಕ್ ಕಾಣಿಸಿಕೊಂಡಿದ್ದಾರೆ. ಆಸೀಸ್ ಪಡೆಯಲ್ಲಿ ಭಾರತೀಯ ಮೂಲದವರು: ಹದಿನೈದು ಸದಸ್ಯರುಗಳಲ್ಲಿ ಭಾರತೀಯ ಮೂಲದವರಾದ ಆರ್ಯನ್ ಶರ್ಮಾ ಹಾಗೂ ಜಾನ್ ಜೇಮ್ಸ್ ಸ್ಥಾನ ಪಡೆದಿದ್ದಾರೆ. ಆರ್ಯನ್  ಎಡಗೈ ಬ್ಯಾಟ್ಸ್‌ಮನ್ ಆಗಿದ್ದರೆ, ಜಾನ್ ಜೇಮ್ಸ್ ಬಲಗೈ ವೇಗದ ಆಲ್‌ರೌಂಡರ್. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತದ ಅಂಡರ್-19 ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗಳಲ್ಲಿ ಇಬ್ಬರೂ ಆಟಗಾರರು ಕಾಣಿಸಿಕೊಂಡಿದ್ದರು. ಈ ವೇಳೆ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆರ್ಯನ್ ಶರ್ಮಾ ಹಾಗೂ ಜಾನ್ ಜೇಮ್ಸ್​ಗೆ ಕಿರಿಯರ ವಿಶ್ವಕಪ್ ತಂಡದಲ್ಲೂ ಸ್ಥಾನ ಲಭಿಸಿದೆ. ಆಸ್ಟ್ರೇಲಿಯಾದಲ್ಲಿ ಏಷ್ಯನ್ನರ ಪಾರುಪತ್ಯ: ಕಿರಿಯರ ವಿಶ್ವಕಪ್​ಗೆ ಪ್ರಕಟಿಸಲಾದ 15 ಸದಸ್ಯರುಗಳ ಈ ತಂಡದಲ್ಲಿ ಐದು ಮಂದಿ ಏಷ್ಯನ್ನರು ಇರುವುದು ವಿಶೇಷ. ಅಂದರೆ ಆರ್ಯನ್ ಶರ್ಮಾ ಮತ್ತು ಜಾನ್ ಜೇಮ್ಸ್ ಅಲ್ಲದೆ, ಶ್ರೀಲಂಕಾ ಮೂಲದ ನಾಡೆನ್ ಕೂರೆ ಮತ್ತು ನಿತೇಶ್ ಸ್ಯಾಮ್ಯುಯೆಲ್ ಕಾಣಿಸಿಕೊಂಡಿದ್ದಾರೆ. ಇನ್ನು  ಚೀನೀ ಮೂಲದ ಒಅಲೆಕ್ಸ್ ಲೀ ಯಂಗ್ ಕೂಡ ಆಸೀಸ್ ಪಡೆಯಲ್ಲಿದ್ದಾರೆ. ಅಂದರೆ 15 ಮಂದಿಯಲ್ಲಿ 5 ಮಂದಿ ಏಷ್ಯಾ ಮೂಲದವರು ಎಂಬುದು ವಿಶೇಷ. ಆಸ್ಟ್ರೇಲಿಯಾ ಅಂಡರ್-19 ಏಕದಿನ​ ತಂಡ: ಒಲೀವರ್ ಪೀಕ್ (ನಾಯಕ), ಕೇಸಿ ಬಾರ್ಟನ್, ನಾಡೆನ್ ಕೂರೆ, ಜೇಡೆನ್ ಡ್ರೇಪರ್, ಬೆನ್ ಗಾರ್ಡನ್, ಸ್ಟೀವನ್ ಹೊಗನ್, ಥಾಮಸ್ ಹೊಗನ್, ಜಾನ್ ಜೇಮ್ಸ್, ಚಾರ್ಲ್ಸ್ ಲ್ಯಾಚ್ಮಂಡ್, ವಿಲ್ ಮಲಾಜ್‌ಜುಕ್, ನಿತೇಶ್ ಸ್ಯಾಮ್ಯುಯೆಲ್, ಹೇಡನ್ ಶಿಲ್ಲರ್, ಆರ್ಯನ್ ಶರ್ಮಾ, ವಿಲಿಯಂ ಟೇಲರ್, ಅಲೆಕ್ಸ್ ಲೀ ಯಂಗ್. ಅಂಡರ್ 19 ವಿಶ್ವಕಪ್​ ಯಾವಾಗ? ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಲಿರುವ ಅಂಡರ್-19 ಪುರುಷರ ಕ್ರಿಕೆಟ್​​ ವಿಶ್ವಕಪ್​ ಟೂರ್ನಿಯು ಜನವರಿ 15 ರಿಂದ ಶುರುವಾಗಲಿದೆ. ಏಕದಿನ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ.

ಮೈಸೂರಿನಲ್ಲಿ ಸೆರೆ ಸಿಕ್ಕಿದ್ದ 4 ಹುಲಿ ಮರಿಗಳ ನಿಗೂಢ ಸಾವು

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌಡನಕಟ್ಟೆಯಲ್ಲಿ ತಾಯಿಯೊಂದಿಗೆ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ತಾಯಿ ಹುಲಿಯನ್ನು ಸೆರೆ ಹಿಡಿದ ಬಳಿಕ ಮರಿಗಳು ಆಹಾರವಿಲ್ಲದೆ, ಆಘಾತದಿಂದ ಅಸ್ವಸ್ಥಗೊಂಡಿದ್ದವು. ಚಿಕಿತ್ಸೆ ನೀಡುತ್ತಿದ್ದರೂ, ಒಂದೊಂದಾಗಿ ಪ್ರಾಣ ಕಳೆದುಕೊಂಡಿವೆ. ಮರಿಗಳ ಸಾವಿಗೆ ನಿಖರ ಕಾರಣ ತಿಳಿಯಲು ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಮೈಸೂರು, ಡಿಸೆಂಬರ್ 10: ಮೈಸೂರು (Mysore) ಜಿಲ್ಲೆಯ ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ನ.29 ರಂದು ತಾಯಿಯೊಂದಿಗೆ 4 ಹುಲಿ ಮರಿಗಳು ಸೆರೆ ಸಿಕ್ಕಿದ್ದವು. ಆಹಾರ ಸೇವಿಸದೆ ಅಸ್ವಸ್ಥಗೊಂಡಿದ್ದ ಹುಲಿಮರಿಗಳೀಗ ಮೃತಪಟ್ಟಿವೆಯೆಂದು ತಿಳಿದುಬಂದಿದೆ. ಮರಿಗಳ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪಶುವೈದ್ಯರು ಮೃತ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ತಾಯಿಯೊಂದಿಗೆ ಸೆರೆಸಿಕ್ಕಿದ್ದ ಮರಿಗಳು ನವೆಂಬರ್ 28ರಂದು ಈ ನಾಲ್ಕು ಮರಿಗಳ ಜೊತೆಗೆ ತಾಯಿ ಹುಲಿಯೂ ಕಾಣಿಸಿಕೊಂಡಿದ್ದು, ನವೆಂಬರ್ 29 ಮತ್ತು 30ರಂದು ಗೌಡನಕಟ್ಟೆಯ ಪ್ರಕಾಶ್‌ ಅವರ ಜೋಳದ ಹೊಲದ ಬಳಿ ಕಾಣಿಸಿಕೊಂಡಿದ್ದ ಹುಲಿ ಮರಿಗಳನ್ನು ಸ್ಥಳೀಯರು ಮತ್ತು ಅರಣ್ಯ ಸಿಬ್ಬಂದಿ ಪತ್ತೆ ಮಾಡಿದ್ದರು.  ಮಧ್ಯರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ತಾಯಿ ಹುಲಿಯನ್ನು ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿತ್ತು. ಪಶುವೈದ್ಯರಿಂದ ನಾಲ್ಕೂ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ತಾಯಿ ಹುಲಿ ಸೆರೆ ಸಿಕ್ಕಿದ ಬಳಿಕ ಎರಡು ದಿನಗಳ ತಾಯಿಯಿಂದ ದೂರವಿದ್ದ ಹುಲಿಮರಿಗಳು, ಆಹಾರವಿಲ್ಲದೆ, ಜನರ ಕಿರುಚಾಟ ಮತ್ತು ಓಡಾಟದಿಂದ ಗಾಬರಿಯಿಂದ ನಿತ್ರಾಣಗೊಂಡಿದ್ದವು. ನಂತರ ಅವುಗಳನ್ನು ಕೂಡ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಾಬರಿಯಿಂದ ಮತ್ತು ಆಹಾರ ಸೇವಿಸದೆ ಅಸ್ವಸ್ಥಗೊಂಡ ಕಾರಣ ಕಳೆದ ನಾಲ್ಕು ದಿನಗಳ ಒಳಗೆ ಒಂದಾದ ಮೇಲೆ ಒಂದು ಮರಿಗಳು ಪ್ರಾಣ ಕಳೆದುಕೊಂಡಿವೆ ಎಂದು ಹೇಳಲಾಗುತ್ತಿದೆ. ಪಶುವೈದ್ಯರು ನಾಲ್ಕೂ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದು, ಮರಿಗಳ ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ತಾಯಿ ಹುಲಿ ಮಾತ್ರ ಸಧ್ಯಕ್ಕೆ ಆರೋಗ್ಯವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಗೋ ಎಫೆಕ್ಟ್​​: ಏರ್​ಲೈನ್ಸ್​ಗಳಿಂದ ಪ್ರಯಾಣಿಕರ ಸುಲಿಗೆಗೆ ದೆಹಲಿ ಹೈಕೋರ್ಟ್​​ ಕಿಡಿ; ಕೇಂದ್ರಕ್ಕೆ ಚಾಟಿ

ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನಲೆ, ಏರ್​ಲೈನ್ಸ್​ಗಳು ಪ್ರಯಾಣಿಕರಿಂದ ಮನಬಂದಂತೆ ಶುಲ್ಕ ವಸೂಲಿ ಮಾಡಿವೆ. 40 ಸಾವಿರದವರೆಗೆ ವಿಮಾನ ದರ ಏರಿಕೆ ಬಗ್ಗೆ ದೆಹಲಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ದೆಹಲಿ, ಡಿಸೆಂಬರ್​​ 10: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನೆಲೆ ಕೇಂದ್ರ ಸರ್ಕಾರವನ್ನ ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಿಮಾನ ಪ್ರಯಾಣ ದರ 40 ಸಾವಿರ ಆಗಲು ಹೇಗೆ ಸಾಧ್ಯ? ಅದನ್ನ ತಡೆಯಲು ಯಾಕೆ ಆಗಲಿಲ್ಲ ಎಂದು ಪ್ರಶ್ನೆ ಮಾಡಿರುವ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಅವರದಿದ್ದ ಪೀಠ, ಪರಿಸ್ಥಿತಿಯನ್ನ ಆತಂಕಕಾರಿ ಎಂದಿದೆ. ಬಿಕ್ಕಟ್ಟು ಸಂದರ್ಭದಲ್ಲಿ ಇತರ ವಿಮಾನಯಾನ ಸಂಸ್ಥೆಗಳಿಗೆ ಲಾಭ ಪಡೆಯಲು ಹೇಗೆ ಅನುಮತಿಸಬಹುದು? ಅದು 35-40 ಸಾವಿರ ಹಣ ಕೊಟ್ಟು ಹೇಗೆ ಹೋಗಲು ಸಾಧ್ಯ? ನೀವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಬಿಟ್ಟಿದ್ದೀರಿ. ಇಂತಹ ಪರಿಸ್ಥಿತಿಯು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಎಂದುಕೇಂದ್ರದ ನಡೆ ಬಗ್ಗೆ ದೆಹಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿರುವ ನಡುವೆ ಉಳಿದ ಏರ್​​ಲೈನ್​ಸ್ಗಳು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದವು. ಟಿಕೆಟ್​​ ದರವನ್ನು ಮನಬಂದಂತೆ ಏರಿಸಿದ್ದ ಪರಿಣಾಮ ದುಪ್ಪಟ್ಟು ಹಣ ಕೊಟ್ಟು ಪ್ರಯಾಣಿಸಬೇಕಾದ ಸ್ಥಿತಿ ಉದ್ಭವಿಸಿತ್ತು. ಬಸ್​​ಗಳ ದರವೂ ಗಗನಮುಖಿಯಾದ ಕಾರಣ ಪ್ರಯಾಣಿಕರು ಈ ಬಗ್ಗೆ ಕಿಡಿ ಕಾರಿದ್ದರು. ಇದೇ ವಿಚಾರವಾಗಿ ಈಗ ದೆಹಲಿ ಹೈಕೋರ್ಟ್​​ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂಡಿಗೋ ವಿಮಾನಗಳ ಹಾರಾಟದಲ್ಲಿ ಚೇತರಿಕೆ ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ನಿಂದ ಹಾರಾಟ ನಡೆಸುವ ಇಂಡಿಗೋ ಏರ್​ಲೈನ್ಸ್​ ವಿಮಾನಗಳ ಸಂಚಾರದಲ್ಲಿ ಚೇತರಿಕೆ ಕಂಡುಬಂದಿದೆ. ಇಂದು 58 ವಿಮಾನಗಳ ಹಾರಾಟ ಮಾತ್ರ ಕ್ಯಾನ್ಸಲ್​ ಆಗಿವೆ. ಏರ್​ಪೋರ್ಟ್​ನಿಂದ ನಿರ್ಗಮಿಸಬೇಕಿದ್ದ 26 ವಿಮಾನಗಳು ಮತ್ತು ಆಗಮಿಸಬೇಕಿದ್ದ 32 ಇಂಡಿಗೋ ಫ್ಲೈಟ್ಸ್​ ರದ್ದಾಗಿವೆ. ನಿನ್ನೆ ಒಟ್ಟು 121 ಇಂಡಿಗೋ ವಿಮಾನಗಳ ಹಾರಾಟ ಕ್ಯಾನ್ಸಲ್ ಆಗಿತ್ತು

ಧರ್ಮಸ್ಥಳ ಬುರುಡೆ ಕೇಸ್​​ಗೆ ಮೇಜರ್​​ ಟ್ವಿಸ್ಟ್​​: SIT ತನಿಖೆಯಿಂದ ಕೊನೆಗೂ ಬಯಲಾಯ್ತು ಸತ್ಯ!

ಧರ್ಮಸ್ಥಳ ‘ಬುರುಡೆ’ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಎಸ್​ಐಟಿ ತನಿಖೆಯಲ್ಲಿ  ಸತ್ಯ ಹೊರಬಂದಿದ್ದು, ಎಲ್ಲ ಮಾಹಿತಿಯನ್ನು ತನಿಖಾ ವರದಿ ಬಟಾಬಯಲು ಮಾಡಿದೆ. ಆ ಮೂಲಕ ಧರ್ಮಸ್ಥಳದಲ್ಲಿ ನೂರಾರು ಅಪರಿಚಿತ ಶವ ಹೂಳಲಾಗಿತ್ತು ಎಂಬ ಆರೋಪಕ್ಕೆ ಬಹುತೇಕ ತೆರೆ ಬಿದ್ದಿದ್ದು, ಆರೋಪಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಮಂಗಳೂರು, ಡಿಸೆಂಬರ್​​ 10: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರೋದಾಗಿ ಮಾಸ್ಕ್​​ಮ್ಯಾನ್​​ ಚಿನ್ನಯ್ಯ ಆರೋಪಿಸಿದ್ದ ಹಿನ್ನಲೆ ಎಸ್​ಐಟಿ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗ್ ಷಡ್ಯಂತ್ರ ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ. ಜಯಂತ್ ಹಾಗೂ ಸುಜಾತಾ ಭಟ್ ಸೇರಿ ಆರೂ ಆರೋಪಿಗಳು ಅಪರಾಧ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಎಸ್​ಐಟಿ ದೃಢಪಡಿಸಿದೆ. ಹಣದ ಆಮಿಷಕ್ಕೆ ಒಳಗಾಗಿ ಎ೧ ಚಿನ್ನಯ್ಯ ಬುರುಡೆ ಕಥೆ ಕಟ್ಟಿದ್ದ. ಬುರುಡೆ ಗ್ಯಾಂಗ್ ಚಿನ್ನಯ್ಯನಿಗೆ ಹಣ ಕೊಟ್ಟು ಪುಸಲಾಯಿಸಿತ್ತು. ಅಪರಿಚಿತ ಶವಗಳನ್ನು ಹೂತಿದ್ದೇನೆಂದು ಚಿನ್ನಯ್ಯನಿಂದ ಸುಳ್ಳು ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ಚಿನ್ನಯ್ಯನಿಗೆ ಮೊದಲಿಂದ ಪರಿಚಿತನಾಗಿದ್ದ ವಿಠ್ಠಲಗೌಡ ಮಹೇಶ್ ತಿಮರೋಡಿ ಮನೆಗೆ ಆತನನ್ನು ಕರೆದೊಯ್ದಿದ್ದ. ತಿಮರೋಡಿ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಮಟ್ಟಣ್ಣನವರ್, ಜಯಂತ್, ವಿಠ್ಠಲಗೌಡ ಭಾಗಿಯಾಗಿದ್ದು, ಧರ್ಮಸ್ಥಳ ಮೇಲ್ವಿಚಾರಕರ ವಿರುದ್ಧ ಪಿತೂರಿಗೆ ಪ್ಲ್ಯಾನ್ ನಡೆದಿತ್ತು. ಅದರಂತೆ ತಲೆ ಬುರುಡೆಯೊಂದನ್ನು ಚಿನ್ನಯ್ಯನಿಗೆ ಕೊಟ್ಟು ಪೊಲೀಸರಿಗೆ ದೂರು ಕೊಡಿಸಿದ್ದರು. ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ಕೊಡುವಂತೆ ಪ್ರೇರೇಪಿಸಿದ್ದರು. ಧರ್ಮಸ್ಥಳ ಪ್ರಕರಣ ಸಂಬಂಧ ಇತ್ತೀಚೆಗೆ ಸ್ವಾಮೀಜಿ ಒಬ್ಬರ ಹೆಸರನ್ನು ಮಹೇಶ್​​ ಶೆಟ್ಟಿ ತಿಮರೋಡಿ ಉಲ್ಲೇಖಿಸಿದ್ದರು. ನಾನು ಮತ್ತು ಚಿನ್ನಯ್ಯ ಆ ಮಠಕ್ಕೆ ಹೋಗಿರುವುದು ಸತ್ಯ. ನಮ್ಮ ಜೊತೆಗೆ ಸೌಜನ್ಯ ಮನೆಯವರೂ ಬಂದಿದ್ದರು. ಆ ವೇಳೆ ಸ್ವಾಮೀಜಿ ಮುಂದೆ ಒಂದೂವರೆ ಗಂಟೆಗಳ ಕಾಲ ಚಿನ್ನಯ್ಯ ಎಲ್ಲವನ್ನೂ ಹೇಳಿದ್ದಾನೆ. ಯಾರೆಲ್ಲ ಅತ್ಯಾಚಾರ ಎಸಗಿದ್ದಾರೆ, ಮಾಡಿಸಿದ್ದಾರೆ ಎಂಬುದನ್ನು ಆತ ಬಹಿರಂಗಪಡಿಸಿದ್ದ ಎಂದು ತಿಳಿಸಿದ್ದರು. ಮತ್ತೊಂದೆಡೆ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೋರ್ಟ್​​ ಜಾಮೀನು ನೀಡಿದರೂ ಬಿಡುಗಡೆ ಭಾಗ್ಯಮಾತ್ರ ಸಿಕ್ಕಿಲ್ಲ. ನವೆಂಬರ್​ 26ರಂದು ಚಿನ್ನಯ್ಯಗೆ ನ್ಯಾಯಾಲಯದಿಂದ ಜಾಮೀನು ಮಂಜೂರು ಆಗಿತ್ತು. ಇಬ್ಬರು ಜಾಮೀನುದಾರರು, 1 ಲಕ್ಷ ಭದ್ರತೆ ಬಾಂಡ್ ನೀಡಲು ಕೋರ್ಟ್​​ ಆದೇಶಿಸಿತ್ತು. ಆದರೆ, ಯಾರೂ ಜಾಮೀನು ಮತ್ತು ಭದ್ರತೆ ಹಣ ಠೇವಣಿ ಮಾಡದ ಹಿನ್ನೆಲೆ ಇನ್ನೂ ಶಿವಮೊಗ್ಗದ ಜೈಲಿನಲ್ಲಿಯೇ ಚಿನ್ನಯ್ಯ ಇರುವಂತಾಗಿದೆ.

ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ರೈಲಿಗೆ ಮುಗಿಬೀಳ್ತಿದ್ದಾರೆ ಪ್ರಯಾಣಿಕರು! ಒಂದೇ ತಿಂಗಳಲ್ಲಿ 55 ಸಾವಿರ ಮಂದಿ ಸಂಚಾರ

ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮೊದಲ ತಿಂಗಳಲ್ಲೇ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. 55,000 ಕ್ಕೂ ಹೆಚ್ಚು ಪ್ರಯಾಣಿಕರು ಈ ರೈಲಿನಲ್ಲಿ ಸಂಚರಿಸಿದ್ದು, 100% ಗಿಂತ ಹೆಚ್ಚು ಬುಕಿಂಗ್ ಆಗಿದೆ. ಕೇರಳ, ತಮಿಳುನಾಡು, ಕರ್ನಾಟಕವನ್ನು ಸಂಪರ್ಕಿಸುವ ಈ ಅರೆ ಹೈಸ್ಪೀಡ್ ರೈಲು ಕ್ರಿಸ್‌ಮಸ್, ಹೊಸ ವರ್ಷ ಮತ್ತು ಶಬರಿಮಲೆ ಯಾತ್ರಿಕರಿಂದಲೂ ಹೆಚ್ಚಿನ ಬೇಡಿಕೆ ಪಡೆದು ಜನಪ್ರಿಯವಾಗಿದೆ. ಬೆಂಗಳೂರು, ಡಿಸೆಂಬರ್ 10: ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಿದ ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗೆ ಮೊದಲ ತಿಂಗಳಲ್ಲೇ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡೂ ಬದಿಯ ಪ್ರಯಾಣಿಕರು ಮಾಡಿರುವ ಬುಕಿಂಗ್‌ಗಳು 100% ದಾಟಿದ್ದು, ಇಲ್ಲಿಯವರೆಗೆ 55,000 ಕ್ಕೂ ಹೆಚ್ಚು ಪ್ರಯಾಣಿಕರು ವಂದೇ ಭಾರತ್ ಎಕ್ಸ್‌ಪ್ರೆಸ್​ನಲ್ಲಿ ಪ್ರಯಾಣಿಸಿದ್ದಾರೆ. 100 ಪ್ರತಿಶತಕ್ಕೂ ಹೆಚ್ಚು ಬುಕಿಂಗ್ ಈ ರೈಲು ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡು ಹಾಗೂ ಕರ್ನಾಟಕವನ್ನು ಸಂಪರ್ಕಿಸುವ ಮೊದಲ ಅಂತಾರಾಜ್ಯ ಅರೆ ಹೈಸ್ಪೀಡ್ ಪ್ರೀಮಿಯಂ ರೈಲು ಎಂಬ ಖ್ಯಾತಿ ಪಡೆದಿದ್ದು, ನವೆಂಬರ್‌ನಲ್ಲಿ ಬೆಂಗಳೂರು-ಎರ್ನಾಕುಲಂ ಗೆ 11,447 ಪ್ರಯಾಣಿಕರು ಪ್ರಯಾಣಿಸಿದ್ದು, ಸರಾಸರಿ 127% ಬುಕಿಂಗ್ ಆಗಿದೆ ಎಂದು ಹೇಳಲಾಗಿದೆ. ನೈಋತ್ಯ ರೈಲ್ವೆ (SWR) ಬೆಂಗಳೂರು ವಿಭಾಗದ ಅಂಕಿಅಂಶಗಳ ಪ್ರಕಾರ, ಡಿಸೆಂಬರ್‌ನಲ್ಲಿ 16,129 ಪ್ರಯಾಣಿಕರು ಸಂಚರಿಸಿದ್ದು, ಶೇ. 117 ಬುಕಿಂಗ್ ಆಗಿದೆ ಎಂದು ತಿಳಿದುಬಂದಿದೆ. ಎರ್ನಾಕುಲಂ-ಬೆಂಗಳೂರು ಸೇವೆಯು ನವೆಂಬರ್‌ನಲ್ಲಿ 12,786 ಪ್ರಯಾಣಿಕರು ಈ ಸೇವೆಯನ್ನು ಸ್ವೀಕರಿಸಿದ್ದು, ಶೇ.141 ರಷ್ಟು ಬುಕಿಂಗ್ ಆಗಿದೆ ಎಂದು ಹೇಳಲಾಗಿದೆ. ಡಿಸೆಂಬರ್‌ನಲ್ಲಿ ಈ ಸಂಖ್ಯೆ 14,742 ಕ್ಕೆ ಏರಿದ್ದು, ಸರಾಸರಿ ಶೇ.106 ರಷ್ಟು ಬುಕಿಂಗ್ ನಡೆದಿದೆ. ಹೊಸ ವರ್ಷಕ್ಕೆ ಟಿಕೆಟ್ ಬುಕಿಂಗ್ ಇನ್ನೂ ಹೆಚ್ಚುವ ಸಾಧ್ಯತೆ ಪ್ರತೀಕ್ಷಾ ಪಟ್ಟಿಯಲ್ಲಿರುವ ಪ್ರಯಾಣಿಕರನ್ನೂ ಸೇರಿಸಿ, ರೈಲ್ವೇಸ್ ಒಟ್ಟು ಬುಕಿಂಗ್‌ಗಳ ಸಂಖ್ಯೆಯಾಗಿ ಆಕ್ಯುಪೆನ್ಸಿಯನ್ನು ಲೆಕ್ಕಾಚಾರ ಮಾಡುತ್ತದೆ. ಇದರರ್ಥ 100 ಸೀಟುಗಳು ಲಭ್ಯವಿದ್ದು, ಅದರಲ್ಲಿ 27 ಬುಕಿಂಗ್‌ಗಳು ಪ್ರತೀಕ್ಷಾ ಪಟ್ಟಿಯಲ್ಲಿದ್ದರೆ , ಆಗ ಆಕ್ಯುಪೆನ್ಸಿಯನ್ನು 127% ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜಾದಿನಗಳು ಹಾಗೂ ಶಬರಿಮಲೆ ತೀರ್ಥಯಾತ್ರೆಯಿಂದಾಗಿ ಡಿಸೆಂಬರ್‌ನಲ್ಲಿ ಟಿಕೆಟ್‌ಗಳಿಗೆ ಬೇಡಿಕೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. ದೈನಂದಿನ ಪ್ರಯಾಣಿಕರು, ವ್ಯಾಪಾರದ ಸಲುವಾಗಿ ಪ್ರಯಾಣಿಸುವವರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಲ್ಲಿ ಈ ರೈಲು ಜನಪ್ರಿಯ ಆಯ್ಕೆಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇಡೀ ರಾಜ್ಯದಲ್ಲಿ ಹಬ್ಬಿದ್ದ ನಕಲಿ ಲೈಂಗಿಕ ಔಷಧಿ ಜಾಲ; ಗುಜರಾತ್ ಮೂಲದ ಆರೋಪಿ ಮನೋಜ್ ಅಂದರ್

ಬೆಂಗಳೂರು ಟೆಕ್ಕಿಯೊಬ್ಬರನ್ನು ಲೈಂಗಿಕ ಸಮಸ್ಯೆ ಪರಿಹಾರದ ನೆಪದಲ್ಲಿ ನಕಲಿ ಗುರೂಜಿ ವಿಜಯ್ ಮತ್ತು ಆತನ ಸಹಚರ 48 ಲಕ್ಷ ರೂ. ವಂಚಿಸಿದ್ದರು.ವಿಜಯ್ ಗುರೂಜಿಯನ್ನು ಈಗಾಗಲೇ ಬಂಧಿಸಿದ್ದ ಜ್ಞಾನ ಭಾರತಿ ಪೊಲೀಸರು ಇದೀಗ ಇನ್ನೋರ್ವನನ್ನೂ ತೆಲಂಗಾಣದಲ್ಲಿ ಬಂಧಿಸಿದ್ದಾರೆ. ಬಂಧಿತರು ಬೆಂಗಳೂರು, ತುಮಕೂರು ಸೇರಿದಂತೆ ಹಲವೆಡೆ ಈ ವಂಚನೆಯ ಜಾಲವನ್ನು ಹರಡಿಸಿದ್ದು, ಎಚ್ಚರದಿಂದಿರುವಂತೆ ಪೊಲೀಸ್ ಕಮಿಶ್ನರ್ ಸಲಹೆ ನೀಡಿದ್ದಾರೆ. ಬೆಂಗಳೂರು, ಡಿಸೆಂಬರ್ 10: ಬೆಂಗಳೂರು (Bengaluru) ಟೆಕ್ಕಿ ತೇಜಸ್‌ ಎಂಬವರನ್ನು ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಮೋಸಮಾಡಿ 48 ಲಕ್ಷ ರೂ. ವಂಚಿಸಿದ ವಿಜಯ್ ಗುರೂಜಿಯನ್ನು ಕೆಲ ದಿನಗಳ ಹಿಂದೆಯಷ್ಟೆ ಪೊಲೀಸರು ಬಂಧಿಸಿದ್ದರು. ಇದೀಗ ಗುರೂಜಿಯ ಸಹಚರನನ್ನೂ ಸಹ ಜ್ಞಾನ ಭಾರತಿ ಪೊಲೀಸರು ಅರೆಸ್ಟ್ ಮಾಡಿದ್ದು, ಇಬ್ಬರನ್ನೂ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ. ತೆಲಂಗಾಣದಲ್ಲಿ ಸೆರೆಸಿಕ್ಕ ಆರೋಪಿ ವಿಜಯ್ ಗುರೂಜಿ ಮತ್ತು ಆತನ ಸಹಚರರಿಂದ ಮೋಸ ಹೋದ ಟೆಕ್ಕಿ ತೇಜಸ್, ತೀವ್ರ ಅನಾರೋಗ್ಯ ಸಮಸ್ಯೆ ಎದುರಾದಾಗ ಪೊಲೀಸರಲ್ಲಿ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ತೆಲಂಗಾಣ ಮೊಹಬೂಬ್ ನಗರದಲ್ಲಿ ವಿಜಯ್ ಗುರೂಜಿಯನ್ನು ಬಂಧಿಸಲಾಗಿತ್ತು. ಇದೀಗ ಆತನ ಸಹಚರ ಮನೋಜ್ ಸಿಂಗ್ ಚಿತ್ತೋಡಿಯಾನನ್ನು ತೆಲಂಗಾಣದ ಸೈಬರಬಾದ್​ನಲ್ಲಿ ಸೆರೆಹಿಡಿಯಲಾಗಿದೆ. ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿಗಳು, ಬೆಂಗಳೂರು, ತುಮಕೂರು ಸೇರಿ ಒಟ್ಟು ಎಂಟು ಟೆಂಟ್ ಗಳನ್ನು ಹೊಂದಿದ್ದರೆಂದು ತಿಳಿದು ಬಂದಿದೆ. ಆರೋಪಿಗಳಿಗೆ ಟೆಕ್ಕಿ ನೀಡಿದ್ದ 40 ಲಕ್ಷದಲ್ಲಿ 19.50 ಲಕ್ಷ ಹಣವನ್ನು ವಶಕ್ಕೆ ಪಡೆದ ಪೊಲೀಸರು, ಒಂದು ಟಿ.ಟಿ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ.

Shorts Shorts