ಭೀಕರ ಅಪಘಾತದಲ್ಲಿ ಹಸೆಮಣೆ ಏರಬೇಕಿದ್ದ ಜೋಡಿಯೊಂದು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸುಕೊಂಡು ಬರುವ ವೇಳೆ ನಡೆದ ಬೈಕ್ ಅಪಘಾತದಲ್ಲಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣಬಿಟ್ಟಿದ್ದಾನೆ. ಹೀಗಾಗಿ ಮದುವೆ ಸಂಭ್ರಮದಲ್ಲಿದ್ದ ಮನೆಗೆ ಭರಸಿಡಿಲು ಬಡಿದಂತಾಗಿದೆ.
ಅವರಿಬ್ಬರೂ ಬದುಕಿನ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದರು. ಜೊತೆಯಾಗಿ ಸಂತೋಷದಿಂದ ಬದುಕಿ ಬಾಳಬೇಕೆಂದು ಅಂದುಕೊಂಡಿದ್ದ ಅವರು, ಇನ್ನೊಂದು 12 ದಿನಗಳು ಕಳೆದರೆ ಸಪ್ತಪದಿಯನ್ನೂ ತುಳಿಯುತ್ತಿದ್ದರು. ಆದರೆ ಅಷ್ಟರಲ್ಲಾಗಲೇ ವಿಧಿ ಅವರ ಬಾಳಲ್ಲಿ ಚೆಲ್ಲಾಟ ಆಡಿದೆ. ಹಸೆಮಣೆ ಏರಬೇಕಿದ್ದ ಜೋಡಿ ಒಟ್ಟಿಗೆ ಪ್ರಾಣ ಬಿಟ್ಟಿದೆ.






